ಹಿಂದು ಮಹಾಗಣಪತಿ ಶೋಭಾಯಾತ್ರೆ ಅದ್ದೂರಿ

Hindu Maha Ganapathi
Published on

ನಾಯಕನಹಟ್ಟಿ: ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದು ಪರಿಷದ್‌ನಿಂದ ಪಟ್ಟಣದ ಪಾದಗಟ್ಟೆ ಆವರಣದಲ್ಲಿ 8ನೇ ವರ್ಷ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದು ಮಹಾಗಣಪತಿ ಮೂರ್ತಿಯ ಶೋಭಯಾತ್ರೆಯೂ ಭಾನುವಾರ ಅದ್ದೂರಿಯಾಗಿ ನೆರವೇರಿತು. ಅಲ್ಲದೆ, ಸ್ವಾಮಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಿ ವಿಸರ್ಜಿಸಲಾಯಿತು.

ಶೋಭಾಯಾತ್ರೆ ಅಂಗವಾಗಿ ಎರಡ್ಮೂರು ದಿನಗಳಿಂದಲೇ ಪಾದಗಟ್ಟೆಯ ಬಳಿ ನೂರಾರು ಕಾರ್ಯಕರ್ತರು ಮಹಾಗಣಪನ ವಿಸರ್ಜನೆಗೆ ಸಕಲ ಸಿದ್ಧತೆ ಕೈಗೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟಗಳು ಮತ್ತು ಬಂಟಿಂಗ್ಸ್‌ಗಳು ರಾರಾಜಿಸಿದವು.

ವಾಲ್ಮೀಕಿ ವೃತ್ತದ ಬಳಿ ಆಕರ್ಷಕವಾಗಿ ವಿವಿಧ ವರ್ಣದ ಪುಷ್ಪಗಳಿಂದ ‘ಓಂ’ ಚಿಹ್ನೆಯ ಚಿತ್ತಾರವನ್ನು ಎಲ್ಲರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಈ ಸ್ಥಳದಲ್ಲಿ ಸೆಲ್ಫಿ ಪ್ರಿಯರು ತಮ್ಮ ಫೋಟೋ ತೆಗೆದುಕೊಳ್ಳುವಲ್ಲಿ ಮಗ್ನರಾದರು.

ಮಧ್ಯಾಹ್ನ 3ಕ್ಕೆ ಮಹಾಗಣಪತಿಯನ್ನು ಅಲಂಕೃತ ಟ್ರಾೃಕ್ಟರ್‌ನೊಳಗೆ ಪ್ರತಿಷ್ಠಾಪಿಸಲಾಯಿತು. ನಂತರ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ಇದೇ ವೇಳೆ ಪಟ್ಟಣ ಸೇರಿ ಸುತ್ತಮುತ್ತಲ ಐದಕ್ಕೂ ಅಧಿಕ ಗ್ರಾಮಗಳಿಂದ ಸಾವಿರಾರು ಮಂದಿ ಯುವಕರು, ಭಕ್ತರು ಪಾಲ್ಗೊಂಡಿದ್ದರು.

ಪಾದಗಟ್ಟೆಯಿಂದ ಆರಂಭವಾಗಿ ವಾಲ್ಮೀಕಿ, ತೇರುಬೀದಿ, ಗುರು ತಿಪ್ಪೇರುದ್ರಸ್ವಾಮಿ ಒಳಮಠ, ಅಂಬೇಡ್ಕರ್ ವೃತ್ತ, ಪೊಲೀಸ್ ಠಾಣೆ ಮಾರ್ಗವಾಗಿ ಸಂಚರಿಸಿದ ನಂತರ ಚಿಕ್ಕಕೆರೆಯ ಸಮೀಪ ಕರೆತರಲಾಯಿತು.

ಡಿಜೆ ಸದ್ದಿಗೆ ಕುಣಿದು ಸಂಭ್ರಮ: ಹೋಬಳಿಯ ವಿವಿಧ ಭಾಗಗಳಿಂದ ಪಾಲ್ಗೊಂಡಿದ್ದ ಯುವಕರು ಡಿಜೆ ಸದ್ದಿನ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು. ನಾಸಿಕ್‌ಡೋಲ್ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಇಬ್ಬರು ಪಿಎಸ್‌ಐ, 6 ಮಂದಿ ಎಎಸ್‌ಐ, ಮುಖ್ಯಪೇದೆಗಳು, ಪೇದೆಗಳು, ಹೋಂಗಾರ್ಡ್ಸ್ 70 ಮಂದಿ, ಒಂದು ಕೆಎಸ್‌ಆರ್‌ಪಿ ತುಕಡಿ ನೇಮಿಸಲಾಗಿತ್ತು. ಪೊಲೀಸರು ವಿಸರ್ಜನೆ ಪೂರ್ಣಗೊಳ್ಳುವವರೆಗೂ ಎಲ್ಲ ಹಂತದ ವಿಡಿಯೋ ಚಿತ್ರೀಕರಿಸಿಕೊಂಡರು.

ಪಟ್ಟಣದಿಂದ 7ಕಿ.ಮೀ ದೂರದ ದೊಡ್ಡಕೆರೆಯಲ್ಲಿ ರಾತ್ರಿ 8ಕ್ಕೆ ಮಹಾಗಣಪನ ವಿಸರ್ಜನಾ ಕಾರ್ಯ ನೆರವೇರಿತು. ಇದೇ ವೇಳೆ ಪಿಎಸ್‌ಐ ದೇವರಾಜ್, ಕೆ.ಶಿವಕುಮಾರ್, ಬಿಜೆಪಿ ಮುಖಂಡರಾದ ಪಿ.ಶಿವಣ್ಣ, ಎಚ್.ವಿ.ಪ್ರಕಾಶ್, ಬಿ.ರಾಜು, ಪಾಪೇಶ್, ಸೋಮಣ್ಣ, ಆರ್‌ಎಸ್‌ಎಸ್ ಕಾರ್ಯಕರ್ತರಾದ ಶಂಕರ್, ವೇಣುಗೋಪಾಲ್, ವಿಜಯ್, ವಿಷ್ಣು, ಮಾರುತಿ, ಬಜರಂಗದಳದ ಪ್ರಾಣೇಶ್, ಪ್ರಹ್ಲಾದ್, ಹುಚ್ಚಮಲ್ಲಯ್ಯ, ತಿಪ್ಪೇಸ್ವಾಮಿ, ಪಿ.ಮಂಜುನಾಥ್, ಜಿ.ಬಿ.ಮುದಿಯಪ್ಪ, ಎನ್.ಮಹಾಂತಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net