ಹಿಂದು ಮಹಾಗಣಪತಿ ವಿಸರ್ಜನೆ

11 ckm 5 web
Published on

ಚಿಕ್ಕಮಗಳೂರು: ಬೃಹತ್ ಬಜರಂಗಿ ಮೆರುಗು ಸೇರಿದಂತೆ ಸಹಸ್ರಾರು ಭಕ್ತರ ಅಮಿತೋತ್ಸಾಹದಲ್ಲಿ ಹಿಂದು ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಬಸವನಹಳ್ಳಿ ಶ್ರೀ ಗಣಪತಿ ಓಂಕಾರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ಬಸವನಹಳ್ಳಿ ಶಾಲೆ ರಸ್ತೆಗೆ ಸಾಗುತ್ತಿದ್ದಂತೆ ಡಿಜೆ ಹಾಡು, ಡೊಳ್ಳು ಶಬ್ದಕ್ಕೆ ವಿದ್ಯಾರ್ಥಿಗಳು ರಸ್ತೆಗಿಳಿದು ಹೆಜ್ಜೆ ಹಾಕಿದರು.

ಜನರು ಕುಣಿದು ಸಂಭ್ರಮಿಸಿದರು. ಭಗವಾಧ್ವಜಗಳು ರಾರಾಜಿಸಿದವು. ಪ್ರತ್ಯೇಕ ಟ್ರ್ಯಾಕ್ಟರ್​ನಲ್ಲಿದ್ದ ಬೃಹತ್ ಬಜರಂಗಿ, ವೀರ ಸಾವರ್ಕರ್ ಭಾವಚಿತ್ರ ಭಕ್ತರ ಆಕರ್ಷಣೆಯಾಗಿತ್ತು. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮನೆಗಳ ಮುಂದೆ ಭಕ್ತರು ಪೂಜೆ, ಮಂಗಳಾರತಿ ಮಾಡಿಸಿ ಲಂಬೋದರನಿಗೆ ವಂದಿಸಿದರು.

ವೀರಗಾಸೆ, ಡೊಳ್ಳು ಕುಣಿತ ತಂಡಗಳು ರಂಗು ತುಂಬಿದವು.ವಿವಿಧ ವೃತ್ತಗಳಲ್ಲಿ ಭಕ್ತರು ಸೇಬು, ಮೋಸಂಬಿ, ಹೂವಿನ ಬೃಹತ್ ಮಾಲಾರ್ಪಣೆ ಮಾಡಿದರು. ಶಾಸಕ ಸಿ.ಟಿ.ರವಿ, ಪಲ್ಲವಿ ರವಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದರು. ಯುವಕರು ಸಿ.ಟಿ.ರವಿ ಅವರನ್ನು ಹೊತ್ತು ಕುಣಿದರು.

ದೇವಸ್ಥಾನದಿಂದ ಹೊರಟ ಮೆರವಣಿಗೆ ಆಶೀರ್ವಾದ ವೃತ್ತ, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದ ವರೆಗೆ ತೆರಳಿ ಹಿಂದಿರುಗಿ ಬಂದು ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ವಿಜಯಪುರ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಸಾಗಿ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net