ಹಿಂದು ಧರ್ಮ ಅತ್ಯಂತ ಶ್ರೇಷ್ಠ ಧರ್ಮ

10skpp2 vhp
Published on

ಸಕಲೇಶಪುರ: ಹಿಂದು ಧರ್ಮವು ಅತ್ಯಂತ ಶ್ರೇಷ್ಠ ಧರ್ಮ ಎಂದು ಪ್ರಾಂತ ಮಂದಿರ ಅರ್ಚಕ ಪುರೋಹಿತ್ ಪ್ರಮುಖ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಎಚ್‌ಪಿ ಹಾಗೂ ಭಜರಂಗದಳ ವತಿಯಿಂದ ಪುಟಾಣಿ ಮಕ್ಕಳಿಗೆ ಆಯೋಜಿಸಲಾಗಿದ್ದ ರಾಧಾ-ಕೃಷ್ಣ ವೇಷಧಾರಿ ಸ್ಪರ್ಧಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸನಾತನ ಹಿಂದು ಧರ್ಮ ಬೇರೆಲ್ಲಾ ಧರ್ಮಗಳಿಗಿಂತ ವಿಶೇಷತೆಯನ್ನು ಹೊಂದಿದೆ.

ಆಕಾಶದ ಬಣ್ಣ ಹೇಗೆ ನೀಲಿ ಬಣ್ಣವಾಗಿದೆಯೋ ಮತ್ತು ಸಮುದ್ರದ ಬಣ್ಣ ಹೇಗೆ ನೀಲಿ ಇದೆಯೋ, ಹಾಗೆಯೇ ಶ್ರೀಕೃಷ್ಣನ ಜ್ಞಾನ ಆಳವಾಗಿದೆ. ಕಲಿಯುಗದ ಶಾಂತಿಗೆ ಆತನ ಸಂದೇಶ ಭಗವದ್ಗೀತೆಯೇ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಪುಟಾಣಿಗಳು ಕೃಷ್ಣನ ವೇಷ ವಿವರಿಸುವುದಲ್ಲದೆ ಕೃಷ್ಣನ ಸಂದೇಶ ತಮ್ಮೊಳಗೆ ಅವಿರ್ಭಾವಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೃಷ್ಣನನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಕೃಷ್ಣ ಚೋರ, ನಾರಿಯರ ಸೀರೆ ಕದ್ದ ಎಂದು ಕೆಲವು ಸಾಹಿತಿಗಳು ಬರೆದು ಅಪಪ್ರಚಾರ ಮಾಡಿದ್ದಾರೆ. ಆದರೆ ಕೃಷ್ಣ ಸಾರ್ವಜನಿಕರ ಸ್ಥಳದಲ್ಲಿ ಹೆಂಗಳೆಯರು ಸ್ನಾನಮಾಡಬಾರದು ಎಂಬ ಎಚ್ಚರಿಕೆ ಕೊಡುವುದರ ಮೂಲಕ ಸಂದೇಶ ಕೊಟ್ಟ ಎಂದರು.

ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಿಂದು ಧರ್ಮ ಅತ್ಯಂತ ಪುರಾತನ ಧರ್ಮವಾಗಿದೆ. ಬಾಲ್ಯದಲ್ಲೇ ತಾಯಂದಿರು ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಸಂಸ್ಕೃತಿ ಕುರಿತು ಅರಿವು ಹೊಂದಲು ಸಾಧ್ಯ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಧರ್ಮ ಉಳಿಯಲು ರಾಮಾಯಾಣ, ಮಹಾಭಾರತ, ಕೃಷ್ಣನ ಲೀಲೆಗಳನ್ನು ಪ್ರತಿಯೊಬ್ಬರು ಓದಬೇಕು ಹಾಗೂ ತಾಯಂದಿರು ಮಕ್ಕಳಿಗೆ ಅದರಲ್ಲಿರುವ ಕಥೆಗಳನ್ನು ಹೇಳಬೇಕು.

ನಾವೆಲ್ಲರೂ ಪುಣ್ಯವಂತರು ಏಕೆಂದರೆ ನಮ್ಮ ಕಾಲದಲ್ಲಿಯೇ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ನಿರ್ಮಾಣವಾಗಿದೆ. ಜಗತ್ತಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಹೇಳಿ ಕೊಟ್ಟ ದೇಶ ಯಾವುದಾದರು ಇದ್ದರೆ ಅದು ಭಾರತ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ಭಾರತ ಪ್ರಪಂಚದಲ್ಲೇ ವಿಶ್ವಗುರುವಾಗುತ್ತಿದೆ. ಸುಮಾರು 144ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಿಂದುಗಳು ಒಗ್ಗಟ್ಟಾದಲ್ಲಿ ಮಾತ್ರ ಧರ್ಮ ಹಾಗೂ ದೇಶದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರು ಹಿಂದು ಸಂಘಟನೆಗಳ ಜತೆ ಕೈಜೋಡಿಸಬೇಕೆಂದು ಹೇಳಿದರು.

ವಿಎಚ್‌ಪಿ ಜಿಲ್ಲಾಧ್ಯಕ್ಷ ಅನುಪ್, ವಿಎಚ್‌ಪಿ ಜಿಲ್ಲಾ ಸಹ ಕಾರ್ಯದರ್ಶಿ ಕರಡಿಗಾಲ ಹರೀಶ್ ಕರಡಿಗಾಲ, ವಿಎಚ್‌ಪಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಿರಡಹಳಿ, ಉಪಾಧ್ಯಕ್ಷ ವಿಜಯ್ ಕುಮಾರ್ ಬಾಳೆಗದ್ದೆ, ಸಂಘಟನೆಯ ಪ್ರಮುಖರಾದ ಕಿಶೋರ್ ಶೆಟ್ಟಿ, ರವಿತೇಜಾ ಬೈಲಹಳ್ಳಿ, ವಿಷ್ಣುರಾವ್,ರವಿ ಹಾರ್ಲೆಕೂಡಿಗೆ, ಸುರೇಶ್ ಹೆತ್ತೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net