ಹಿಂದು ದೇವರಿಗೆ ಅವಮಾನ ಮಾಡಬೇಡಿ

c3a90435-ad96-4788-8b3e-661aaae1db0a
Published on

ಬಾಗಲಕೋಟೆ: ಗಣಪತಿ ಪ್ರಸಾದ ಕೊಡಬೇಕಾದರೆ ಅದನ್ನು ಆಹಾರ ಇಲಾಖೆಯವರು ಪರೀಕ್ಷೆ ಮಾಡಬೇಕಂತೆ. ಸಿದ್ದರಾಮಯ್ಯ ಅವರೆ ನೀವು ಹುಟ್ಟುವ ಮೊದಲು ಹಾಗೂ ನಿಮ್ಮ ಕಾಂಗ್ರೆಸ್ ಪಕ್ಷ ಹುಟ್ಟುವ ಮೊದಲೇ ದೇಶದಲ್ಲಿ ಗಣಪತಿ ಮೂರ್ತಿಯನ್ನು ಕೂಡಿಸುತ್ತಿದ್ದರು. ನೀವು ಹಿಂದು ಧರ್ಮದ ಬಗ್ಗೆ ಯಾಕೆ ಇಟ್ಟೊಂದು ಕೀಳುಮಟ್ಟದ ರಾಜಕಾರಣ ಮಾಡುತ್ತೀರಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ನೀವು ಮಸೀದಿ, ಚರ್ಚ್ಗಳಲ್ಲಿ ಕೊಡುವ, ತಿನ್ನುವ ಪದಾರ್ಥಗಳನ್ನು ಪರೀಕ್ಷೆ ಮಾಡಿದ್ದೀರಾ? ಮತ್ತೆ ಗಣಪತಿ ಪ್ರಸಾದ ವಿತರಣೆಗೆ ಯಾಕೆ ಪರೀಕ್ಷೆ ಎನ್ನುವ ಕಾನೂನು? ಹಿಂದು ದೇವರುಗಳಿಗೆ, ಕಾನೂನಿಗೆ ಅಮಪಾನ ಮಾಡಬೇಡಿ. ಹಿಂದುಗಳ ಬಗ್ಗೆ ನಿಕೃಷ್ಣ ಭಾವನೆ ಸರಿಯಲ್ಲ ಎಂದರು.

ಇನ್ನು ಸಿದ್ದರಾಮಯ್ಯ ಅವರು ದೇವಾಲಯಗಳಿಗೆ ಹೋಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಅವರು ಹಿಂದೆ ಅನೇಕ ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಈಗ ಹೋಗುತ್ತಿದ್ದಾರೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಚಾಮುಂಡಿ ಬೆಟ್ಟಕ್ಕಂತೂ ಮೇಲಿಂದ ಮೇಲೆ ಹೋಗುತ್ತಿದ್ದಾರೆ. ಹಿಂದು ಸಂಸ್ಕೃತಿ ಬಗ್ಗೆ ಅವರಿಗೆ ಹೆಚ್ಚಿನ ಗೌರವ ಬಂದಿದೆಯಲ್ಲ, ಅದು ತುಂಬಾ ಸಂತೋಷ. ಇಂತಹ ಸಂದರ್ಭದಲ್ಲಿ ಹಿಂದು ಸಮಾಜದ ಮೇಲೆ ಆಗುತ್ತಿರುವ ಅಘಾತ ತಡೆದುಕೊಳ್ಳಲು ಆಗಲ್ಲ ಎಂದು ತಿಳಿಸಿದರು.

ಕುಂದಾಪುರ ಕಾಲೇಜಿನ ಪ್ರಿನ್ಸಿಪಾಲ ಹಿಜಾಬ್ ಹಾಕಿಕೊಂಡು ಕಾಲೇಜ್ ಗೇಟ್ ಒಳಗಡೆ ಬರಬೇಡಿ ಎಂದಿದ್ದರು. ಅದೇ ಕಾರಣಕ್ಕೆ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದ ಅವರ ಹೆಸರನ್ನು ತಡೆಹಿಡಿಯುತ್ತಾರೆ ಎಂದರೆ? ಇದು ಹಿಂದು ಧರ್ಮ ಹಾಗೂ ಪ್ರಿನ್ಸಿಪಾಲಗೂ ಮಾಡಿದ ಅವಮಾನ. ಮುಸ್ಲಿಂರನ್ನು ಸಂತೃಪ್ತಿ ಪಡಿಸುವ ವ್ಯವಸ್ಥೆ ಒಳ್ಳೆಯದಲ್ಲ. ಸಿದ್ದರಾಮಯ್ಯ ಅವರೇ ಹಿಂದು ದೇವಸ್ಥಾನಗಳಿಗೆ ಹೋಗಿದ್ದೀರಿ. ಹಿಂದು ಧರ್ಮದ ಬಗ್ಗೆ ನಿಮಗೆ ಆಸಕ್ತಿ ಇದೆ. ಹೀಗಾಗಿ ಒಳ್ಳೆಯ ಪ್ರಿನ್ಸಿಪಾಲ ಎಂದು ಘೋಷಣೆ ಮಾಡಿರುವ ಅವರಿಗೆ ಪ್ರಶಸ್ತಿ ಕೊಡಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net