

ರಿಪ್ಪನ್‌ಪೇಟೆ:ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾದ ಎಲ್ಲ ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸಮಸಮಾಜದ ಆಶಯವನ್ನು ಕಟ್ಟಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರ ಹಿಂದು ಕೋಡ್ ಬಿಲ್ ಈ ಜಗತ್ತಿನ ಒಂದು ಉತ್ಕೃಷ್ಟ ಮಹಾಕಾವ್ಯವೆಂದು ಕೊಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿ.ಎನ್.ಧನಂಜಯಮೂರ್ತಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಕಲಾ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಮಹಿಳೆಯರಿಗೂ ಸಮಾನ ಅವಕಾಶ ದೊರಕಿಸುವ ಮಹತ್ತರವಾದ ಮಹಿಳಾಪರ ವಿಧೇಯಕ ಸದನದಲ್ಲಿ ಬಹುಮತ ಗಳಿಸದಿದ್ದಾಗ ಮನನೊಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಮೊದಲ ಸಚಿವ ಡಾ. ಬಿ.ಆರ್.ಅಂಬೇಡ್ಕರ್. ಇಂತಹ ಹೋರಾಟ ಸ್ವಭಾವದ ಸ್ವಾಭಿಮಾನಿ ಎಲ್ಲರಿಗೂ ಮಾರ್ಗದರ್ಶಕ ಎಂದರು. ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಜಾತಿ, ಅಸ್ಪ ೃಶ್ಯತೆ ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಕೇವಲ ತಳವರ್ಗದ ಒಂದೆರಡು ಜಾತಿಗಳಿಗೆ ಸೀಮಿತವಾಗದೆ ಈಡಿಗ, ಒಕ್ಕಲಿಗ, ಕುರುಬ, ಲಿಂಗಾಯತ, ಮರಾಠ ಸಮುದಾಯಗಳು ಸಹಿತ ಅಸ್ಪ ೃಶ್ಯತೆಯಿಂದ ಹೊರತಾಗಿಲ್ಲ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳು ಹಾಗೂ ವಿದ್ವಾಂಸರು ರಚಿಸಿರುವ ಸಂಶೋಧನಾ ಗ್ರಂಥಗಳಿಂದ ಇದು ತಿಳಿಯಬಹುದು ಎಂದು ಹೇಳಿದರು. ಪ್ರಾಚಾರ್ಯ ಎಚ್.ಎಸ್.ವಿರೂಪಾಕ್ಷಪ್ಪ, ಡಿ.ಎಲ್.ರಾಜು, ಪ್ರೊ. ಆರ್.ಕೆ. ರಾಜು, ಡಾ. ವಿದ್ಯಾ, ಡಾ. ಎಂ.ಕುಮಾರ, ಕೆ.ಆರ್.ಹರ್ಷಕುಮಾರ್, ಟಿ.ಅಂಜನ್‌ಕುಮಾರ್, ಇ.ಪ್ರಕಾಶ್ ಇತರರಿದ್ದರು.
ಅಂಬೇಡ್ಕರ್ ವಿಚಾರದ ಬಗ್ಗೆ ಮಾತನಾಡುವ, ಕೆಲಸ ಮಾಡುವ, ಭಾವಚಿತ್ರ ಪ್ರದರ್ಶಿಸುವ ಎಲ್ಲರನ್ನೂ ಅಸ್ಪ ೃಶ್ಯರಂತೆಯೇ ಕಾಣಲಾಗುತ್ತಿದೆ. ಅಂಬೇಡ್ಕರ್ ಅವರ ಬದುಕು ಮತ್ತು ಬರಹದಲ್ಲಿ ಗುಲಾಮಗಿರಿಗಿಂತ ಅಸ್ಪ ೃಶ್ಯತೆ ಘೋರವೆಂದು ವ್ಯಾಖ್ಯಾನಿಸಿದ್ದಾರೆ. ಶ್ರೇಷ್ಠ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತೀಯ ಸಮಾಜಶಾಸ್ತ್ರದ ಪಿತಾಮಹ ಎಂದು ಘೋಷಿಸಬೇಕು. ಜಿ.ಎನ್.ಧನಂಜಯಮೂರ್ತಿ, ಸಹಾಯಕ ಪ್ರಾಧ್ಯಾಪಕ