ಹಿಂದು ಕಾರ್ಯಕರ್ತರ ಮೇಲೆ ವಿನಾಃಕಾರಣ ಎ್ಐಆರ್

Nijaguna Raju
Published on

ಚಾಮರಾಜನಗರ: ನಗರದಲ್ಲಿ ನಡೆದಿದ್ದ ಹನುಮ ಜಯಂತಿಯಲ್ಲಿ ಪಟಾಕಿಯೊಡೆದ ಕಾರಣವನ್ನು ಮುಂದಿಟ್ಟುಕೊಂಡು, ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ವಿನಾಃಕಾರಣ ಎ್ಐಆರ್ ದಾಖಲಿಸಿದ್ದಾರೆ ಎಂದು ಕಾಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿಜಗುಣರಾಜು ಆರೋಪಿಸಿದರು.

ನಗರದಲ್ಲಿ ಭಜರಂಗದಳದ ವತಿಯಿಂದ ಜ.4 ರಂದು ನಡೆದ ಹನುಮ ಜಯಂತಿ ಸಂದರ್ಭದಲ್ಲಿ ಕಾರ್ಯಕರ್ತರು ಸಂತೇಮರಹಳ್ಳಿ ವೃತ್ತದಲ್ಲಿ ಪಟಾಕಿಯನ್ನು ಹೊಡೆದಿದ್ದರು. ಅದನ್ನು ಕಾರಣವಾಗಿ ಇಟ್ಟುಕೊಂಡು ಸುಮಾರು 9 ತಿಂಗಳಿಂದ ಸುಮ್ಮನಿದ್ದು, ಇತ್ತೀಚೆಗೆ ಭಜರಂಗದಳದ 10 ಕಾರ್ಯಕರ್ತರ ಮೇಲೆ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ. ಈ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಹಿಂದು ಧಾರ್ಮಿಕ ಭಾವನೆಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಹಿಂದು ಕಾರ್ಯಕರ್ತರ ಮನಸ್ಥಿತಿಯನ್ನು ವಿಚಲಿತಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.

ನಗರದಲ್ಲಿರುವ ಮುಸ್ಲಿಂ ಸಮುದಾಯದವರು ಹಾಗೂ ಹಿಂದುಗಳು ಒಗ್ಗಟ್ಟಿನಿಂದ ಇದ್ದು, ಯಾವುದೇ ಗಲಭೆಗಳು ನಡೆಯದಂತೆ ನಮ್ಮ ನಮ್ಮ ಧರ್ಮದ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಆದರೇ ಪೊಲೀಸರು ಎ್ಐಆರ್‌ನಲ್ಲಿ ಹಿಂದು ಕಾರ್ಯಕರ್ತರು ಮಸೀದಿಯ ಮುಂಭಾಗ ಭಗವಾಧ್ವಜವನ್ನು ಹಾರಿಸಿದರು, ಜೈಕಾರ ಹಾಕಿದರು, ಪಟಾಕಿ ಹೊಡೆದರು ಎಂದು ದಾಖಲಿಸಿದ್ದಾರೆ. ಈ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಹಿಂದು-ಮುಸ್ಲಿಂ ಗಲಾಟೆಗೆ ಪ್ರಚೋದನೆಯನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಕೇಂದ್ರದಲ್ಲಿ ಅಕ್ರಮವಾಗಿ 11 ಇಸ್ಪೀಟ್ ಕ್ಲಬ್‌ಗಳು ನಡೆಯುತ್ತಿದ್ದು, ಸಾವಿರಾರು ಜನರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿಕೆಗಳನ್ನು ನೀಡುತ್ತಾರೆ. ಇವರು ಬರುವ ಮುಂಚೆ ಜಿಲ್ಲಾ ಕೇಂದ್ರದಲ್ಲಿ 3 ಇಸ್ಪೀಟ್ ಕ್ಲಬ್‌ಗಳು ಮಾತ್ರ ಇದ್ದವು. ಆದರೆ ಇವರು ಅಧಿಕಾರ ವಹಿಸಿಕೊಂಡ ನಂತರ 11 ಕ್ಲಬ್‌ಗಳಾಗಿವೆ. ಇಡೀ ಜಿಲ್ಲೆಯಲ್ಲಿ ಸರಣಿ ಕಳ್ಳತನ, ಮನಿ ಡಬ್ಲಿಂಗ್, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಕೇರಳಕ್ಕೆ ಅಕ್ರಮವಾಗಿ ದನ, ಪಡಿತರ ಅಕ್ಕಿ ಮತ್ತು ಎಂ ಸ್ಯಾಂಡ್ ಸಾಗಾಣಿಕೆ ಮಾಡಲಾಗುತ್ತಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಪಿ.ವೃಷಭೇಂದ್ರಪ್ಪ, ನಗರಸಭಾ ಸದಸ್ಯ ಮನೋಜ್ ಪಟೇಲ್, ಮುಖಂಡರಾದ ನಟರಾಜ್, ಪರಶಿವಯ್ಯ, ಹನುಮಜಯಂತಿ ಅಧ್ಯಕ್ಷ ಪೃಥ್ವಿರಾಜ್, ಸದಸ್ಯ ಮಧು ಹಾಜರಿದ್ದರು.

ಜಿಲ್ಲಾ ಪೊಲೀಸರು ಮನಿ ಡಬ್ಲಿಂಗ್ ಪ್ರಕರಣದಲ್ಲಿ ಯಾರೋ ಒಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತ್ತುಗೊಳಿಸಿ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆಯೊಬ್ಬರು ಗೂಗಲ್ ಪೇ ಮೂಲಕ ಹಣ ಪಡೆದಿದ್ದರೂ ಅಂತವರ ಮೇಲೆ ಕ್ರಮವಹಿಸಿಲ್ಲ. ಆದರೇ ಹನುಮ ಜಯಂತಿ ಮಾಡುವವರ ಮೇಲೆ ದೂರು ದಾಖಲಿಸುತ್ತಾರೆ. ಜನಪ್ರತಿನಿಧಿಗಳು ಮೌನವಾಗಿರುವುದನ್ನು ನೋಡಿದರೆ ಅವರದ್ದೂ ಇದರಲ್ಲಿ ಪಾಲಿದೆ ಎನಿಸುತ್ತದೆ.

-ಸೂರ್ಯಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ ಯುವಮೋರ್ಚಾ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net