ಹಿಂದಿಯಲ್ಲಿ ಮಾತನಾಡದ ಕನ್ನಡಿಗನ ಮೇಲೆ ಹಲ್ಲೆ

00000
Published on

ಉತ್ತರ ಪ್ರದೇಶ ಮೂಲದ ಮೂವರ ಬಂಧನ

ವಿಜಯವಾಣಿ ಸುದ್ದಿಜಾಲ ಆನೇಕಲ್
ಕನ್ನಡ ಮಾತನಾಡಿದ ಕಾರ್ಮಿಕನ ಮೇಲೆ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ.
ಪಟ್ಟಣದ ನಿವಾಸಿ ಶಿವಲಿಂಗ (40) ಹಲ್ಲೆಗೊಳಗಾದ ಕಾರ್ಮಿಕ. ಆನೇಕಲ್ ರುದ್ರಮ್ಮ ಬಡಾವಣೆಯ ಕೃಷ್ಣಮೂರ್ತಿ ಎಂಬುವವರ ಮನೆಯಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದ ಶಿವಲಿಂಗ ಹಾಗೂ ಅದೇ ಮಾಲೀಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರ ನಡುವೆ ಭಾಷೆಯ ವಿಚಾರದಲ್ಲಿ ಕಿರಿಕಿರಿ ಆಗಿದೆ. ಬುಧವಾರ ಬೆಳಗ್ಗೆ ಮಗ್ಗದ ಕಾರ್ಖಾನೆಯಲ್ಲಿ ಕೆಲಸದ ವಿಚಾರಕ್ಕೆ ಮಾತನಾಡುತ್ತಿದ್ದಾಗ ಯುಪಿ ಮೂಲದ ಮನು ಮತ್ತು ಕಾಶಿ ಮೂಲದ ಅನ್ಸಾರಿ ಹಾಗೂ ಇನ್ನೊಬ್ಬ ಕಾರ್ಮಿಕ, ಕನ್ನಡ ಮಾತನಾಡಬೇಡ… ನಮ್ಮ ಬಳಿ ಹಿಂದಿ ಮಾತನಾಡು ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಏಕಾಏಕಿ ಕಬ್ಬಿಣದ ರಾಡ್ ತೆಗೆದುಕೊಂಡು ಶಿವಲಿಂಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಸುಮಾರು 9 ವರ್ಷದಿಂದ ಶಿವಲಿಂಗ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಉತ್ತರ ಪ್ರದೇಶದ ಮೂಲದ ಕಾರ್ಮಿಕರು ಇತ್ತೀಚೆಗೆ ದುಂಡಾ ವರ್ತನೆ ತೋರಿದ್ದಾರೆ. ತೀವ್ರ ರಕ್ತಸ್ರಾವ ಆಗಿದ್ದ ಶಿವಲಿಂಗ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ನ್ಯಾಯ ಸಿಗದೆ ಇದ್ದಾಗ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕೆಲಸಕ್ಕೆ ಹೊರ ರಾಜ್ಯದ ಕಾರ್ಮಿಕರು ಸಿಕ್ಕಿದ್ದಾರೆ ಎನ್ನುವ ಕಾರಣಕ್ಕೆ ಸ್ಥಳೀಯರ ವಿರೋಧವಾಗಿ ಮಗ್ಗದ ಮಾಲೀಕರು ಕೂಡ ನಡೆದುಕೊಳ್ಳಬಾರದು. ಇದು ಹೀಗೆ ಮುಂದುವರಿದರೆ ಹೋರಾಟದ ಮೂಲಕ ಎಚ್ಚರಿಕೆ ಕೊಡುತ್ತೇವೆ.ಸನಾವುಲ್ಲ, ವಾಟಾಳ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಿಂದಿಯಲ್ಲಿ ಮಾತನಾಡು ಎಂದು ದರ್ಪದಿಂದ ಪದೇಪದೆ ಒತ್ತಾಯಿಸುತ್ತಿದ್ದಾರೆ. ಹಲವು ವರ್ಷದಿಂದ ಮಗ್ಗ ಬಿಡುತ್ತಿರುವ ಕಾರ್ಮಿಕರು ಇಂತಹ ವರ್ತನೆಗಳಿಂದ ನೋವು ಪಡುವಂತಾಗಿದೆ, ಹಲ್ಲೆ ಮಾಡಿ ಓಡುತಿದ್ದ ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಶಿವಲಿಂಗ ಗಾಯಗೊಂಡ ಕಾರ್ಮಿಕ

ಕಾರಿಗೆ ಸಿಲುಕಿ ಮಗು ಸಾವು

ನಂದಗುಡಿ: ಹೊಸಕೋಟೆ ತಾಲೂಕು ಹಿಂಡಿಗನಾಳ ಗ್ರಾಮದಲ್ಲಿ ಕಾರಿಗೆ ಸಿಲುಕಿ ಮಗು ಮೃತಪಟ್ಟಿದೆ. ಹರೀಶ್ ಮತ್ತು ಪವಿತ್ರಾ ದಂಪತಿ ಪುತ್ರ ದೀಕ್ಷಿತ್ (3) ಮೃತ ಮಗು. ಹಿಂಡಿಗನಾಳದ ಚನ್ನಪ್ಪ ಬಡಾವಣೆಯಲ್ಲಿ ಮಂಗಳವಾರ ಮನೆ ಮುಂದೆ ಆಟವಾಡುತ್ತಿದ್ದಾಗ ಕಾರು ಮಗುವಿನ ಮೇಲೆ ಹರಿದಿದೆ. ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದಿಂದ ಹಿಂಡಿಗನಾಳ ಗ್ರಾಮಕ್ಕೆ ಮಗು ತನ್ನ ತಾಯಿ ಜತೆ ಬಂದಿತ್ತು. ಸ್ಥಳದಲ್ಲೇ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ನಂದಗುಡಿ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಂಪಮ್ಮ ದೇವಸ್ಥಾನದಲ್ಲಿ ಕಳವು

ತ್ಯಾಮಗೊಂಡ್ಲು: ದೊಡ್ಡಚನೋಹಳ್ಳಿಯ ಕೆಂಪಮ್ಮ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಹಣವನ್ನು ದೋಚಲಾಗಿದೆ. ಸೋಮವಾರ ಸಂಜೆ ದೇವಸ್ಥಾನದ ಪೂಜಾರಿ ಸಿದ್ದರಾಜು ಎಂದಿನಂತೆ ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿ ಬಂದಿದ್ದರು. ಮಂಗಳವಾರ ಬೆಳಗ್ಗೆ ಸಾರ್ವಜನಿಕರು ಕಳವಾಗಿರುವುದನ್ನು ಗಮನಿಸಿ ಪೂಜಾರಿಗೆ ತಿಳಿಸಿದ್ದು, ಸಿದ್ದರಾಜು ತ್ಯಾಮಗೊಂಡ್ಲು ಠಾಣೆಗೆ ದೂರು ನೀಡಿದ್ದಾರೆ.

11 ಜೂಜುಕೋರರ ಬಂಧನ

ಆನೇಕಲ್: ಜೂಜುಅಡ್ಡೆ ಮೇಲೆ ದಾಳಿ ನಡೆಸಿರುವ ಜಿಗಣಿ ಪೊಲೀಸರು, 11 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ. ಮುನಿಕೃಷ್ಣ(32), ಹರೀಶ್(28), ವಿನೋದ್ ರಾಜ್(37), ನಾಗೇಶ್(39),ನಂಜಪ್ಪ (39), ಮನೋಜ್(27) ನವೀನ್ ಕುಮಾರ್ (35) ಅಂಬರೀಷ್(36),ನಾಗರಾಜು(29), ಶಿವಕುಮಾರ್ (39), ಹರೀಶ(29) ಬಂಧಿತರು. ಜಿಗಣಿ ಠಾಣಾ ವ್ಯಾಪ್ತಿಯ ಕೊಪ್ಪ ಗೇಟ್-ಬುಕ್ಕಸಾಗರ ರಸ್ತೆಯ ನಿಸರ್ಗ ಬಡಾವಣೆಯ ಕಾಂಪೌಂಡ್ ಪಕ್ಕದಲ್ಲಿ ಯುವಕರು ಗುಂಪು ಕಟ್ಟಿಕೊಂಡು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದರು. ಪಣಕ್ಕಿಟ್ಟಿದ್ದ 29.910 ರೂಪಾಯಿ ನಗದು, 12 ಮೊಬೈಲ್, 4 ಬೈಕ್ ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net