

ದೇವರಹಿಪ್ಪರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ರೈತವಿರೋಧಿ ನೀತಿಗಳು ರಾಜ್ಯದ ರೈತ ಸಮುದಾಯದ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಕೂಡಲೇ ಹಿಂದಿನ ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಮುಂದುವರಿಸಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಮಂಡಲ ಬಿಜೆಪಿ ರೈತಮೋರ್ಚಾದಿಂದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನಿಲುವು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರ 5 ಗ್ಯಾರಂಟಿಗಳ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ರೈತ ಹಾಗೂ ಜನವಿರೋಧಿ ನೀತಿ ಅಳವಡಿಸಿಕೊಂಡಿದೆ. ಹಿಂದಿನ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಾದ ಕಿಸಾನ್ ಸಮ್ಮಾನ , ರೈತ ವಿದ್ಯಾನಿಧಿ, ಭೂಸಿರಿ, ಶ್ರಮಶಕ್ತಿ ರೈತ ಸಂಪದಗಳಂತ ರೈತಪರ ಯೋಜನೆಗಳು, ಜಿಲ್ಲೆಗೊಂದು ಗೋಶಾಲೆ, ಎಪಿಎಂಸಿ ಕಾಯ್ದೆ, ಕೃಷಿಭೂಮಿ ಮಾರಾಟ ಕಾಯ್ದೆಗಳನ್ನು ಕೈಬಿಟ್ಟು ಬೇಕಾಬಿಟ್ಟಿ ಆಡಳಿತಕ್ಕೆ ಮುಂದಾಗಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ, ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಗುರುನಾಥ ಮುರುಡಿ, ಮಂಡಲ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕಲ್ಲೂರ ಮಾತನಾಡಿ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳು ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಬರ ಪರಿಹಾರ ಕಾಮಗಾರಿ ವಿಳಂಬ ನೀತಿಗಳಿಂದ ರೈತ ಸಮುದಾಯ ಸಾಲದ ಸುಳಿಗೆ ಸಿಲುಕಿದೆ. ಆದರೆ ಸರ್ಕಾರದ ಜವಾಬ್ದಾರಿಯುತ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡವರು ರೈತರೇ ಅಲ್ಲ ಎಂದು ಹೇಳುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕಾರ್ಯ ಮಾಡಿದ್ದಾರೆ. ಇದು ರೈತರ ಕುರಿತು ಸರ್ಕಾರ ಹೊಂದಿರುವ ನಿಲುವನ್ನು ತೋರಿಸುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪಟ್ಟಣದ ಮೊಹರೆ ಹಣಮಂತರಾಯ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಯ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಅಲ್ಲಿ ಸಭೆ ನಡೆಸಿ ಶಿರಸ್ತೇದಾರ ಮಹಿಪತಿ ದೇಸಾಯಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಭೀಮನಗೌಡ ಲಚ್ಯಾಣ, ಸೋಮು ದೇವೂರ, ಸುಭಾಸ ಗುಂಡಕನಾಳ, ಸೋಮು ಹಿರೇಮಠ, ಮಹಾಂತೇಶ ಬಿರಾದಾರ, ವಿಠ್ಠಲ ಯಂಕಂಚಿ, ಹುಸೇನ್ ಗೌಂಡಿ, ಪ್ರಕಾಶ ದೊಡಮನಿ, ಆಕಾಶ ಕಬ್ಬಿನ, ಬಸವರಾಜ ಜಲಪುರ, ಸಂಜು ಹರವಾಳ, ಪ್ರವೀಣ ಲಮಾಣಿ ಇತರರು ಪ್ರತಿಭಟನೆಯಲ್ಲಿದ್ದರು.