

ತುಮಕೂರು: ಶ್ರೀ ಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಶನಿವಾರ ತುಮಕೂರು ಪ್ರವೇಶ ಮಾಡಿದಾಗ ನಗರದ ದಿಗಂಬರ ಜೈನ ಸಮಾಜದ ಮುಖಂಡರು ಭಕ್ತಿ, ಗೌರವದಿಂದ ಸ್ವಾಗತಿಸಿದರು.
ನಗರದ ಮಹಾವೀರ ಭವನ ಬಳಿ ಸ್ವಾಮೀಜಿ ಸ್ವಾಗತಿಸಲಾಯಿತು. ನಂತರ ನಡೆದ ಸ್ವಾಮೀಜಿಗಳ ನೇತೃತ್ವದ ಶೋಭಾಯಾತ್ರೆಗೆ ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಶೋಭಾಯಾತ್ರೆ ಎಂ.ಜಿ.ರಸ್ತೆ, ಗುಂಚಿ ಚೌಕ, ಸ್ವಾತಂತ್ರ ವೃತ್ತ, ಮಂಡಿಪೇಟೆ ವೃತ್ತದ ಮೂಲಕ ಚಿಕ್ಕಪೇಟೆಯ ಜಿನ ಮಂದಿರ ತಲುಪಿತು. ಜಿನ ಮಂದಿರದಲ್ಲಿ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಭಗವಂತರಿಗೆ ಪೂಜೆ ನೆರವೇರಿಸಿದರು. ದಿಗಂಬರ ಜೈನ ಸಮಾಜದ ಗಣ್ಯರು, ಸಮಾಜದ ವಿವಿಧ ಸಂಸ್ಥೆಗಳ ಮುಖಂಡರು ಈ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ನಂತರ ಬಿ.ಎಚ್.ರಸ್ತೆಯ ಜೈನ ಭವನದಲ್ಲಿ ನಿರ್ಮಿಸಿರುವ ಸಿ.ರಾಮಚಂದ್ರ ಸ್ಯಾದ್ವಾದಿಯ ಜಿನವಾಣಿ ಸ್ವಾದ್ಯಾಯ ಮಂದಿರ ಉದ್ಘಾಟನೆಯನ್ನು ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮತ್ತು ನರಸಿಂಹರಾಜಪುರದ ಸಿಂಹಗದ್ದೆಯ
ಶ್ರೀಕ್ಷೇತ್ರ ಬಸ್ತಿಮಠದ ಲಕ್ಷಿ$್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೆರವೇರಿಸಿದರು. ನಂತರ ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಶಾಸ್ತ್ರ, ಪೂಜಾ ಪದ್ಧತಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಇತ್ತೀಚಿನ ದಿನಗಳಲ್ಲಿನ ಪೂಜಾ ಪದ್ಧತಿಯಲ್ಲಿ ಬದಲಾಲಾಗಿದೆ ಆದರೆ ಹಿಂದಿನಿಂದ ನಡೆದ ಬಂದ ಪದ್ಧತಿಯನ್ನೇ ಅನುಸರಿಸಬೇಕು.
ಪೂಜೆಯಲ್ಲಿ ಚಲನಚಿತ್ರ ಗೀತೆ ಬಳಸಬಾರದು, ಪೂಜಾ ವಿಧಾನ ಮಂಗಳಕರವಾಗಿರಬೇಕು ಎಂದರು. ಶ್ರೀ ಲಕ್ಷಿ$್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಜಾತಿ ತಾಯಿಯಿಂದ, ಕುಲ ತಂದೆಯಿಂದ ಬರುತ್ತದೆ. ಜೈನ ಧರ್ಮ ಆದರ್ಶವಾದ ಧರ್ಮ. ಈ ಧರ್ಮದಲ್ಲಿ ಹುಟ್ಟುವುದು ಪುಣ್ಯದ ಫಲ. ಜನ್ಮಜನ್ಮಾಂತರದ ಪುಣ್ಯ ಸಂಪಾದಿಸಿದವರು ಜೈನ ಧರ್ಮದಲ್ಲಿ ಹುಟ್ಟುತ್ತಾರೆ. ಜೈನ ಧರ್ಮಿಯರು ವಿಜಾತಿ ವಿವಾಹ ಮಾಡಿಕೊಳ್ಳಬೇಡಿ, ಪ್ರೇಮ ವಿವಾಹ ಮಾಡಿಕೊಳ್ಳಬೇಡಿ ಎಂದು ತಿಳಿಸಿದರು. ಮಾಜಿ ಸಚಿವ ಸೊಗಡು ಶಿವಣ್ಣ, ಖಜಾಂಚಿ ಸುಭೋದ್ ಕುಮಾರ್ ಜೈನ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಇತರರು ಇದ್ದರು.