

ಚಿತ್ರದುರ್ಗ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಯಾವ ಕಾರಣಕ್ಕೂ ಕನ್ನಡ ವಿರೋಧಿ ನಡೆ ಅನುಸರಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಪ್ರಧಾನಿ ಅವರು ಈ ಕೂಡಲೇ ಸಂವಿಧಾನ ತಿದ್ದುಪಡಿ ಮೂಲಕ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನು ಅಧಿಕೃತ, ಆಡಳಿತ ಭಾಷೆಯನ್ನಾಗಿ ಘೋಷಿಸಿ ದೇಶದ ಬಹುತ್ವ, ಸಾರ್ವಭೌಮತ್ವ ಕಾಪಾಡಬೇಕು. 343ರಿಂದ 351ನೇ ವಿಧಿಗಳನ್ನು ರದ್ದುಗೊಳಿಸಿ ಭಾರತದ ಸರ್ವ ಭಾಷೆಗಳನ್ನೂ ಒಕ್ಕೂಟದ ವ್ಯವಸ್ಥೆಯಡಿ ಸಮನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದಡಿ ಬರುವ ಕರ್ನಾಟಕದ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ, ಉದ್ಯೋಗಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಜೊತೆಗೆ ವ್ಯವಹಾರ ಚಟುವಟಿಕೆಗಳು ನಡೆಯಬೇಕು. ರಾಜ್ಯದಲ್ಲಿ ತ್ರಿಭಾಷೆ ಬದಲು ದ್ವಿಭಾಷೆ ಸೂತ್ರ ಜಾರಿಗೊಳಿಸಬೇಕು ಎಂದು ಕೋರಿದರು.
ವೇದಿಕೆ ಅಧ್ಯಕ್ಷ ಟಿ.ರಮೇಶ್, ಪದಾಧಿಕಾರಿಗಳಾದ ವಿಜಯಕುಮಾರ್, ಆರ್.ಜಿ.ಲಕ್ಷ್ಮಣ್, ಶಿವಮೂರ್ತಿ, ಜಿ.ರಾಜಪ್ಪ, ಪಿ.ರಮೇಶ್, ರಮೇಶ್, ವಸಂತ, ಮಲ್ಲಾಪ್ರಸಾದ್, ಮನು, ನೀಲಕಂಠ, ಪ್ರಸನ್ನ, ಜಯಪ್ಪ, ದ್ರಾಕ್ಷಾಯಿಣಿ, ಸುಮಾ, ಮಂಜುಳಾ, ರಾಮಕೃಷ್ಣಪ್ಪ, ದಾದಾಪೀರ್ ಇತರರಿದ್ದರು.