ಹಿಂದಿ ಹೇರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

JDS Protest photo-1
Published on

ಬೀದರ್: ಕೇಂದ್ರ ಸರ್ಕಾರವು ಹಿಂದಿ ದಿವಸ್ ಆಚರಣೆ ಹೆಸರಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಬಲವಂತವಾಗಿ ಹಿಂದಿ ಭಾಷೆ ಹೇರುತ್ತಿರುವುದನ್ನು ಖಂಡಿಸಿ ಜಾತ್ಯತೀತ ಜನತಾ ದಳದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಕ್ಷದ ಜಿಲ್ಲಾ ಘಟಕದ ಕಚೇರಿಯಿಂದ ಮೋಹನ್ ಮಾರ್ಕೇಟ್, ಹರಳಯ್ಯ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಹಿಂದಿನಿಂದಲೂ ಕೇಂದ್ರ ಸರ್ಕಾರಗಳು ಹಿಂದಿ ದಿವಸ್ ಆಚರಣೆ ಮೂಲಕ ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತ ಬಂದಿವೆ. 400 ವರ್ಷಗಳ ಹಿಂದಿ ಭಾಷೆಯ ಹಬ್ಬ ಆಚರಿಸುತ್ತಿರುವ ಸರ್ಕಾರಕ್ಕೆ 2,500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಏಕೆ ನೆನಪಾಗುತ್ತಿಲ್ಲ ಎಂದು ಪಕ್ಷದ ಪ್ರಮುಖರು ಪ್ರಶ್ನಿಸಿದರು.
ಕರ್ನಾಟಕ ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರು ಆಗಿದೆ. ವೈವಿಧ್ಯಮಯ ಸಂಸ್ಕøತಿ ಹೊಂದಿರುವ ಕರ್ನಾಟಕವೇ ಒಂದು ಅದ್ಭುತ ಪ್ರಪಂಚ. ರಾಜ್ಯದಲ್ಲಿ ಸಂಬಂಧವೇ ಇಲ್ಲದ ಭಾಷೆಯ ಹಬ್ಬ ಆಚರಿಸುತ್ತಿರುವುದು ದೊಡ್ಡ ಅನ್ಯಾಯ ಎಂದು ದೂರಿದರು.
ಹಿಂದಿ ದಿವಸ್ ಆಚರಣೆಯನ್ನು ಹಿಂದಿ ಭಾಷಿಕ ರಾಜ್ಯಗಳಿಗೆ ಸೀಮಿತಗೊಳಿಸಬೇಕು. ಕನ್ನಡಿಗರಿಗೆ ಅದರ ಅವಶ್ಯಕತೆ ಇಲ್ಲ. ಹೊರಗಿನವರ ದಾಳಿಯ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ತಕ್ಕ ಉತ್ತರ ಕೊಡುತ್ತ ಬಂದಿದ್ದಾರೆ. ಈಗಲೂ ಹಿಂದಿಯ ಬಲವಂತದ ಹೇರಿಕೆಯನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಕಾರ್ಯಾಧ್ಯಕ್ಷ ತಾಜೊದ್ದಿನ್, ಮುಖಂಡರಾದ ಮಾರುತಿ ಬೌದ್ಧೆ, ಐಲಿನ್ ಜಾನ್ ಮಠಪತಿ, ಲಲಿತಾ ಕರಂಜಿ, ಶಾಂತಮ್ಮ ಮೊತಕಪಳ್ಳಿ, ಸಜ್ಜದ್ ಸಾಹೇಬ, ಗಾಲೇಬ್ ಹಾಷ್ಮಿ, ನಬಿ ಖುರೇಶಿ, ಸರ್ಫರಾಜ್, ಶೇಕ್ ಅಝರ್, ಅಭಿ ಕಾಳೆ, ಬೊಮ್ಮಗೊಂಡ ಚಿಟ್ಟಾ, ಸೂರ್ಯಕಾಂತ ದಂಡಿನ್, ಬಾಬುರಾವ್ ಗಾದಗಿ, ಆಬೇದ್ ಅಲಿ ಮೊದಲಾದವರು ಪಾಲ್ಗೊಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net