ಹಿಂಡಿನಿಂದ ಬೇರ್ಪಟ್ಟು ನಿತ್ರಾಣಗೊಂಡ ಮರಿಯಾನೆ

29blrp3
Published on

ಬೇಲೂರು: ತಾಲೂಕಿನ ಮಲೆನಾಡು ಭಾಗದ ಕೋಗೋಡು ಗ್ರಾಮದ ಕಾಫಿ ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ಎಂಟು ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಮರಿಯಾನೆಯೊಂದು ನಿತ್ರಾಣಗೊಂಡು ಎರಡು ದಿನದಿಂದ ಕೋಗೋಡು ಗ್ರಾಮದ ಆಸುಪಾಸಿನಲ್ಲೆ ಓಡಾಡುತ್ತಿದೆ.
ಒಂದು ವಾರದ ಹಿಂದೆ ಕಾಡಾನೆಗಳ ಗುಂಪಿನಿಂದ ಬೇರೆಯಾದ ಮರಿಯಾನೆ ಒಂಟಿಯಾಗಿ ತೋಟಗಳಲ್ಲಿ ಓಡಾಡುತಿತ್ತು. ಆದರೆ ಅರಣ್ಯ ಇಲಾಖೆಯವರು ಮರಿಯಾನೆಯನ್ನು ಆನೆಗಳ ಹಿಂಡಿಗೆ ಸೇರಿಸಿದ್ದರು. ಆದರೆ ಕಾಡಾನೆಗಳು ಪುನಃ ಮರಿಯನ್ನು ಒಂಟಿಯಾಗಿ ಬಿಟ್ಟು ಬೇರೆಡೆಗೆ ತೆರಳಿವೆ.


ಈಗ ಮರಿಯಾನೆಯೂ ಜನರು ಕಂಡರೆ ಸಾಕು ಅವರಿದ್ದಲ್ಲಿಗೆನೇ ತೆರಳುತ್ತಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಆನೆ ಮರಿಯ ಹತ್ತಿರಕ್ಕೆ ಹೋಗಲು ಯಾರನ್ನೂ ಬಿಡುತ್ತಿಲ್ಲ. ಅದು ನಿತ್ರಾಣವಾಗಿ ತೋಟದ ರಸ್ತೆಗಳಲ್ಲಿ ನಿಧಾನವಾಗಿ ಓಡಾಡುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಈ ಮರಿಯಾನೆಯನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿರುವುದು ಇಲಾಖೆ ಸಿಬ್ಬಂದಿಗೆ ತಲೆನೋವಾಗಿದೆ. ಪಶು ವೈದ್ಯರು ಭಾನುವಾರ ಬಂದು ಮರಿಯಾನೆಯನ್ನು ತಪಾಸಣೆ ನಡೆಸಿದ ನಂತರ ಮರಿಯಾನೆಗೆ ಏನಾಗಿದೆ? ಅದು ಹಿಂಡಿನಿಂದ ಒಂಟಿಯಾಗಿ ಉಳಿಯಲು ಕಾರಣವೇನು? ಎಂಬುದು ತಿಳಿಯಲಿದೆ.


ಕೋಗೋಡು ಗ್ರಾಮದ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡಿನಿಂದ ಮರಿಯಾನೆ ಬೇರ್ಪಟ್ಟು ಒಂಟಿಯಾಗಿ ಓಡಾಡುತ್ತಿದೆ. ಆದರೆ ಕಾಡಾನೆಗಳು ಈ ಮರಿಯಾನೆಯ ಹತ್ತಿರಕ್ಕೂ ಬರುತ್ತಿಲ್ಲ. ಈ ಆನೆ ತುಂಬಾ ದಿನಗಳಿಂದ ಆಹಾರ ತಿಂದಿಲ್ಲವೇನೋ ಎಂಬಂತೆ ಕಾಣುತ್ತಿದೆ. ಇತ್ತ ಅರಣ್ಯ ಇಲಾಖೆಯವರು ಮರಿಗೆ ಏನಾದರೂ ಆಹಾರ ಕೊಡಬೇಕು. ಇಲ್ಲ ಮರಿಯನ್ನು ಇಲಾಖೆಯಿಂದ ಹಿಡಿದು ಆರೋಗ್ಯ ತಪಾಸಣೆ ನಡೆಸಿ ಅದರ ಆರೋಗ್ಯ ರಕ್ಷಿಸುವುದಕ್ಕೆ ಮುಂದಾಗಬೇಕು ಎಂಬುದು ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಹರೀಶ್ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net