ಹಿಂಡಲಗಾದಲ್ಲಿ ಬೀಡುಬಿಟ್ಟ ತನಿಖಾ ತಂಡ

18Manju5
ಸಂತೋಷ ಆತ್ಮಹತ್ಯೆ ಹಿನ್ನಲೆ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಪಂನಲ್ಲಿ ತನಿಖಾ ತಂಡದ ಪೊಲೀಸರು ಅಧಿಕಾರಿಗಳ ವಿಚಾರಣೆ ನಡೆಸಿದರು.
Published on

ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸೋಮವಾರ ತುಂಡು ಗುತ್ತಿಗೆದಾರರು, ಹಿಂಡಲಗಾ ಪಿಡಿಒ ಅವರಿಂದ ಮಾಹಿತಿ ಕಲೆ ಹಾಕಿದರು. ಅಲ್ಲದೆ, ಕಾಮಗಾರಿ ನಡೆದಿದೆ ಎನ್ನಲಾದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಸ್ಥ್ಥಳೀಯರಿಂದ ಮಾಹಿತಿ ಪಡೆದರು.

ಸಂತೋಷ ಆತ್ಮಹತ್ಯೆ ಪ್ರಕರಣದ ಬೆನ್ನು ಬಿದ್ದಿರುವ ತನಿಖಾ ತಂಡದ ಪೊಲೀಸರು ಕಳೆದ ಮೂರು ದಿನಗಳಿಂದ ತನಿಖೆ ನಡೆಸುತ್ತಿದ್ದಾರೆ. ಸಂತೋಷ ಕುರಿತು ಕುಟುಂಬಸ್ಥರು ಮಾಹಿತಿ ನೀಡಿರುವ ಆಧಾರದ ಮೇಲೆ ಪೊಲೀಸರು ಸೋಮವಾರ ಗ್ರಾಪಂ ಹಾಲಿ ಪಿಡಿಒ ವಸಂತಕುಮಾರಿ ಹಾಗೂ ಮಾಜಿ ಪಿಡಿಒ ಗಂಗಾಧರ ನಾಯಕ ಅವರನ್ನು ಮೂರು ಗಂಟೆಗೂ ಅಧಿಕ ಕಾಲ ಸುದೀರ್ಘ ವಿಚಾರಣೆ ನಡೆಸಿದರು. ಅಲ್ಲದೆ, ಗ್ರಾಪಂ ಕಚೇರಿಯಲ್ಲಿನ ಕೆಲ ಕಡತ ವಶಪಡಿಸಿಕೊಂಡರು.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ 2021 ಫೆಬ್ರವರಿಯಲ್ಲಿ ಸಂತೋಷ ಪಾಟೀಲ 108 ಕಾಮಗಾರಿ ನಡೆಸಿದ್ದರು. ಅದರಲ್ಲಿ ವರ್ಕ್ ಆರ್ಡರ್ ಇಲ್ಲದೆ ಸುಮಾರು 4 ಕೋಟಿ ರೂ. ಕಾಮಗಾರಿ ಮಾಡಲಾಗಿದೆ ಎಂದು ಸಂತೋಷ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಆದರೆ, ಗ್ರಾಪಂಗಳಲ್ಲಿ ಈ ಕಾಮಗಾರಿ ಕುರಿತು ಅಧಿಕೃತವಾದ ಯಾವುದೇ ದಾಖಲೆಗಳಿಲ್ಲ. ಆದರೆ, ವಾಸ್ತವದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮತ್ತೊಂದೆಡೆ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ತನಿಖಾ ಅಧಿಕಾರಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾರ ನಿರ್ದೇಶನದ ಮೇರೆಗೆ, ಯಾವ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬುದು ತನಿಖಾ ತಂಡಕ್ಕೆ ಗೊಂದಲ ಉಂಟಾಗಿದೆ. ಹಾಗಾಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

12 ಜನರಿಂದ ಕಾಮಗಾರಿ

ಗೋಕಾಕ ನಗರದಲ್ಲಿ ಸೋಮವಾರ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ತುಂಡು ಗುತ್ತಿಗೆದಾರ ರಾಜು ಜಾಧವ ಮಾತನಾಡಿ, ಹಿಂಡಲಗಾ ಗ್ರಾಮದಲ್ಲಿ ಮೃತ ಸಂತೋಷ ಪಾಟೀಲ ಒಬ್ಬನೇ 4 ಕೋಟಿ ರೂ. ಕಾಮಗಾರಿ ಕೈಗೊಂಡಿಲ್ಲ. ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಮತ್ತು ಮೃತ ಸಂತೋಷ ಪಾಟೀಲ ಅವರು ವರ್ಕ್ ಆರ್ಡರ್ ತರುತ್ತೇವೆ. ನೀವು ಕೆಲಸ ಮಾಡಿ ಎಂದು ಹೇಳಿದ ಮೇಲೆ 12 ಜನ ಸೇರಿಕೊಂಡು ತುಂಡು ಕಾಮಗಾರಿ ಮಾಡಿದ್ದೇವೆ. ಆದರೆ, ನಾವ್ಯಾರು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿಯಾಗಿಲ್ಲ. ನಾನು ಒಬ್ಬನೇ 27 ಲಕ್ಷ ರೂ. ವೆಚ್ಚದ ಕಾಮಗಾರಿ ಮಾಡಿದ್ದೇನೆ. ನನ್ನ ಜತೆ 12 ಜನ ಕಾಮಗಾರಿ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net