ಹಿಂಗಾರಿನ ಆರಂಭದಲ್ಲೇ ಆಘಾತ

12MDG1 A
Published on

ಮುಂಡರಗಿ: ನಿರಂತರವಾಗಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಿತ್ತನೆ ಮಾಡಲಾದ ಹಲವು ಬೆಳೆಗಳಿಗೆ ತೇವಾಂಶ ಹೆಚ್ಚಳವಾಗಿ ರೋಗಬಾಧೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ.

ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಅಂದಾಜು 4 ಸಾವಿರ ಹೆಕ್ಟೇರ್ ಉಳ್ಳಾಗಡ್ಡಿ, 150 ಹೆಕ್ಟೇರ್ ಮೆಣಸಿನಕಾಯಿ, 20,197 ಹೆಕ್ಟೇರ್ ಗೋವಿನಜೋಳ, 336 ಹೆಕ್ಟೇರ್ ಸಜ್ಜಿ, 10,978 ಹೆಕ್ಟೇರ್ ಹೆಸರು, 6,173 ಹೆಕ್ಟೇರ್ ಶೇಂಗಾ, 9,921 ಹೆಕ್ಟೇರ್ ಸೂರ್ಯಕಾಂತಿ, 2362 ಹೆಕ್ಟೇರ್ ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ತೇವಾಂಶ ಹೆಚ್ಚಾಗಿದ್ದರಿಂದ ಬಹುತೇಕ ಉಳ್ಳಾಗಡ್ಡಿ, ಹೆಸರು, ಹತ್ತಿ ಮೊದಲಾದ ಬೆಳೆಗಳು ಹಾನಿಯಾಗಿವೆ.

ಆಗಸ್ಟ್ 30ಕ್ಕೆ ಮುಂಗಾರು ಪೂರ್ಣಗೊಂಡು ಸೆಪ್ಟೆಂಬರ್ 1ರಿಂದ ಹಿಂಗಾರು ಹಂಗಾಮು ಶುರುವಾಗಿದೆ. ಈಗಾಗಲೇ ತಾಲೂಕಿನ ಹಲವೆಡೆ ಹೈಬ್ರಿಡ್​ಜೋಳ, ಬಿಳಿ ಜೋಳ, ಕಡಲೆ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಆದರೆ, ಬೆಳೆಗಳಲ್ಲಿ ನೀರು ನಿಂತು ತಂಪು ಹೆಚ್ಚಾಗಿದೆ. ಬೆಳೆಯಲ್ಲಿ ಅಲ್ಲಲ್ಲಿ ಬಿಳಿ, ಹಳದಿ ಹಾಗೂ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ. ಮುಂಗಾರಿನಲ್ಲಿ ತೇವಾಂಶ ಹೆಚ್ಚಳದಿಂದ ಬೆಳೆ ಹಾನಿಯಾಗಿತ್ತು. ಈಗ ಹಿಂಗಾರಿನ ಆರಂಭದಲ್ಲೇ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾರಿ ಮಳೆಯಿಂದ ಜಮೀನಿನ ಬದುವಿನಲ್ಲಿ ಮಳೆ ನೀರು ಸಂಗ್ರಹವಾಗಿವೆ. ಹಲವೆಡೆ ಭತ್ತದ ಬೆಳೆ ಮಳೆಗೆ ನೆಲಕಚ್ಚುತ್ತಿದೆ. ಭತ್ತ ನೆಲಕಚ್ಚುವುದರಿಂದ ಭತ್ತದ ಕಾಳು ಜೊಳ್ಳಾಗಲಿದ್ದು ರೈತರು ಮತ್ತೊಂದು ರೀತಿಯ ಸಮಸ್ಯೆ ಎದುರಿಸಲಾಬೇಕಾಗಿದೆ.

ವಾಡಿಕೆಗಿಂತ ಹೆಚ್ಚು ಮಳೆ: ಹಿಂಗಾರು ಪ್ರಾರಂಭದಿಂದಲೂ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಸೆಪ್ಟೆಂಬರ್​ನಲ್ಲಿ 128 ಮಿ.ಮೀ. ವಾಡಿಕೆ ಮಳೆ ಇದ್ದು, 198 ಮಿ.ಮೀ. ಮಳೆಯಾಗಿದೆ.

ಮನೆಗೋಡೆ ಕುಸಿತ: ಮಳೆಯಿಂದಾಗಿ ಪಟ್ಟಣ ಸೇರಿದಂತೆ ಡಂಬಳ, ಹಿರೇವಡ್ಡಟ್ಟಿ, ಹೈತಾಪೂರ, ಹಳ್ಳಿಕೇರಿ, ಡೋಣಿ, ಮಲ್ಲಿಕಾರ್ಜುನಪುರ, ಕದಾಂಪುರ, ಕೊರ್ಲಹಳ್ಳಿ, ಮುಂಡವಾಡ, ಮೊದಲಾದ ಗ್ರಾಮಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳ ಗೋಡೆಗಳು, ಮೇಲ್ಛಾವಣಿ ಕುಸಿದಿದ್ದು ಅಪಾರ ಹಾನಿ ಸಂಭವಿಸಿದೆ.

ಮುಂಗಾರಿನಲ್ಲಿ ಹೆಸರು, ಹತ್ತಿ, ಉಳ್ಳಾಗಡ್ಡಿ ಮೊದಲಾದ ಬೆಳೆಗಳು ತೇವಾಂಶ ಹೆಚ್ಚಳದಿಂದ ಹಾನಿಯಾದವು. ಈಗ ಹಿಂಗಾರು ಪ್ರಾರಂಭದ ಹಂತದಲ್ಲೇ ಮತ್ತೆ ನಿರಂತರ ಮಳೆ ಸುರಿಯುತ್ತಿದೆ. ಕೆಲವೆಡೆ ಹಿಂಗಾರು ಬಿತ್ತನೆ ಮಾಡಲಾಗಿದೆ, ಇನ್ನು ಹಲವೆಡೆ ಬಿತ್ತನೆ ಮಾಡಬೇಕಿದೆ. ಬಿತ್ತನೆ ಮಾಡಿದ ಬೆಳೆಗೆ ತೇವಾಂಶ ಹೆಚ್ಚಳವಾಗಿ ರೋಗ ತಗುಲುವ ಆತಂಕವಾಗಿದೆ. ಮಳೆ ಬಿಡುವು ಇಲ್ಲದ ಕಾರಣ ಹಲವು ಕಡೆಗಳಲ್ಲಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಲಿದೆ. | ಬಸವರಾಜ ಅಂಕದ, ಚನ್ನಬಸಪ್ಪ ಹಳ್ಳಿ, ಮಹಾಂತೇಶ ಮೂಗಲಿ ರೈತರು.

ಮಳೆ ಹೆಚ್ಚಿರುವುದರಿಂದ ರೈತರು ಬಿತ್ತನೆ ಮಾಡುವಾಗ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಅದರಿಂದ ಬೆಳೆಗೆ ರೋಗ ಬರದಂತೆ ತಡೆಗಟ್ಟಬಹುದು ಹಾಗೂ ಉತ್ತಮ ಬೆಳೆ ಬರಲು ಸಹಕಾರಿಯಾಗುತ್ತದೆ. ಬೆಳೆವಿಮೆ ತುಂಬಿದ ರೈತರು ರೈತಮಿತ್ರ ಆಪ್​ನಲ್ಲಿ ಬೆಳೆಹಾನಿ ವಿವರವನ್ನು ಅಪ್​ಲೋಡ್ ಮಾಡಬೇಕು. ಅಪ್​ಲೋಡ್ ಮಾಡಿದ ಮೂರು ದಿನಗಳಲ್ಲಿ ಬೆಳೆವಿಮೆ ಕಂಪನಿಯವರು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತಾರೆ. ಆಪ್ ಬಳಸಲು ಸಾಧ್ಯವಾಗದವರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಬೆಳೆವಿಮೆ ತುಂಬದ ರೈತರು ಬೆಳೆಹಾನಿ ಅನುಭವಿಸಿದರೆ ಈ ಬಗ್ಗೆ ನಮ್ಮ ಗಮನಕ್ಕೆ ತಂದರೆ ಮೇಲಧಿಕಾರಿಗಳ ಜತೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. | ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net