

ಅರಕೇರಾ: ಶೈಕ್ಷಣಿಕವಾಗಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳ ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕುತ್ತಿದ್ದೀರಿ ಎಂದು ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಶಾಸಕಿ ಕರೆಮ್ಮ ಜಿ.ನಾಯಕ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ಆಲ್ಕೋಡ ಗ್ರಾಮದಲ್ಲಿರುವ ಕಸ್ತೂರಬಾ ವಸತಿ ಶಾಲೆಯಲ್ಲಿ ಅವ್ಯವಸ್ಥೆ ಕಂಡು ಶಾಸಕಿ ಗರಂ ಆದರು. ವಿದ್ಯಾರ್ಥಿಗಳಿಗೆ ಮೀಸಲಿರುವ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ವಸತಿ ಶಾಲೆಯಲ್ಲಿ ಮಕ್ಕಳಿಗೆ ಮೂಲ ಸೌಕರ್ಯಗಳು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸ್ಟೆಲ್ ಮೇಲ್ವಿಚಾರಕಿ ಸುರೇಖಾ ಪಾಟೀಲ್, ಡಿಡಿಪಿಐ ಕೆ.ಡಿ.ಬಡಿಗೇರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ವಸತಿ ಶಾಲೆಯಲ್ಲಿ ಸಮಸ್ಯೆಗಳಿಗೆ ಕಾರಣ ತಿಳಿಸಬೇಕು. ಮಕ್ಕಳಿಗೆ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ. ನಿಮ್ಮ ಮಕ್ಕಳಿಗೆ ಇದೇ ರೀತಿಯ ಶಿಕ್ಷಣ, ಆಹಾರ ನೀಡಿದರೆ ಗೊತ್ತಾಗಲಿದೆ ಎರಡು ದಿನಗಳಲ್ಲಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರಮುಖರಾದ ಸಿದ್ದಣ್ಣ ದೊಂಡಂಬಳಿ, ಕುಪ್ಪಯ್ಯ ಆಲ್ಕೋಡ ಇತರರಿದ್ದರು.