

ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಅವರು ನಗರದ ಆಕಾಶವಾಣಿ ಸಮೀಪದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ಗೆ ಶನಿವಾರ ರಾತ್ರಿ ದಿಢೀರ್ ಭೇಟಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಂದ ದೂರುಗಳ ಸರಮಾಲೆಯೇ ಕೇಳಿ ಬಂದವು.
ವಸತಿ ನಿಲಯದ ಅವ್ಯವಸ್ಥೆ ಕಂಡು ಆಯುಕ್ತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಮೇಲಧಿಕಾರಿಯ ದಿಢೀರ್ ದಾಳಿಯಿಂದ ತಬ್ಬಿಬ್ಬಾದ ಅಧಿಕಾರಿ, ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು. ಪ್ರಶ್ನೆಗೆ ಮೂರು ಕಡೆಯಿಂದಲೂ ವಿಭಿನ್ನ ಉತ್ತರ ಬಂದಾಗ ಆಕ್ರೋಶಗೊಂಡ ಕೆ.ಶ್ರೀನಿವಾಸ್ ಇದೇ ಬೇಜವಾಬ್ದಾರಿತನ ಮುಂದುವರಿದರೆ ಕ್ರಮ ಜರುಗಿಸಬೇಕಾಗುತ್ತದೆಂದು ಎಲ್ಲರಿಗೂ ಎಚ್ಚರಿಕೆ ನೀಡಿದರು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಹಿತದೃಷ್ಟಿಯಿಂದ ಸಮಿತಿ ರಚನೆಯಾಗದೆ ಇದ್ದುದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಕಿವಿ ಹಿಂಡಿದ ಆಯುಕ್ತ:
ಹಾಸ್ಟೆಲ್‌ಗೆ ಭೇಟಿ ನೀಡುತ್ತಿದ್ದಂತೆ ಮಲಗುವ ಕೊಠಡಿ, ಊಟದ ಮನೆ, ಹಾಲ್, ಶೌಚಾಲಯ ಹೀಗೆ ಎಲ್ಲವನ್ನೂ ಪರಿಶೀಲಿಸಿದ ಅವರು, ಅನೈರ್ಮಲ್ಯ ಕಂಡು ವಿದ್ಯಾರ್ಥಿಗಳ ಕಿವಿ ಹಿಂಡಿದರು. ನೀವೆಲ್ಲ ಎಸ್‌ಎಸ್‌ಎಲ್‌ಸಿ ಮುಗಿಸಿಯೇ ಇಲ್ಲಿಗೆ ಬಂದಿರುತ್ತೀರಿ. ವಾಸಿಸುವ ಜಾಗ ಸ್ವಚ್ಛವಾಗಿರಬೇಕೆಂಬ ಪರಿಜ್ಞಾನ ಬೇಡವೇ. ವೈದ್ಯಕೀಯ, ಇಂಜಿನೀಯರಿಂಗ್, ಕಂಪ್ಯೂಟರ್ ಸೈನ್ಸ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶಿಸ್ತು ಇರಬೇಕಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಪಾಲಕರು ಕಷ್ಟಪಟ್ಟು ನಿಮನ್ನು ಕಳುಹಿಸಿರುವುದು ಓದಿ ಉನ್ನತ ಸ್ಥಾನ ತಲುಪಲಿ ಎಂಬ ಉದ್ದೇಶದಿಂದ ಹೊರತು ಮಜಾ ಮಾಡಲು ಅಲ್ಲ. ಹುಟ್ಟಿದ ಊರು ಹಾಗು ಕಲಿತ ಕಾಲೇಜಿಗೆ ಕೀರ್ತಿ ತರಬೇಕೆಂದರೆ ನಿರಂತರ ವ್ಯಾಸಂಗ ಮಾಡಬೇಕು. ಆ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಆದರೆ ನೀವು ವಿದ್ಯಾಭ್ಯಾಸದಲ್ಲಿ ಆಸಕ್ತಿ ವಹಿಸುತ್ತಿಲ್ಲವೆಂಬುದು ಇಲ್ಲಿನ ಅವ್ಯವಸ್ಥೆ ನೋಡಿದರೆ ತಿಳಿಯುತ್ತದೆಂದರು.
ವಿದ್ಯಾರ್ಥಿಗಳ ದೂರು:
ಹಾಸ್ಟೆಲ್‌ನಲ್ಲಿ ಅಡುಗೆ ಚೆನ್ನಾಗಿ ಮಾಡುವುದಿಲ್ಲ. ಅಡುಗೆ ಕೆಲಸದವರು ಪ್ರತಿದಿನ ಬದಲಾಗುತ್ತಾರೆ. ಬೆಳಿಗ್ಗೆ ಬಂದವರು ರಾತ್ರಿ ಕರ್ತವ್ಯಕ್ಕೆ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಗಮನ ಸೆಳೆದಾಗ ಹಾಗಾದರೆ ಸಿಬ್ಬಂದಿಗೆ ಅರ್ಧ ಸಂಬಳ ಕೊಡುತ್ತಿದ್ದೀರಾ ಹಾಸ್ಟೆಲ್ ಮೇಲ್ವಿಚಾರಕ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್‌ನಲ್ಲಿ 165 ವಿದ್ಯಾರ್ಥಿಗಳಿದ್ದು ಎಷ್ಟು ಕೆ.ಜಿ. ಚಿಕನ್ ತರುತ್ತಾರೆಂದು ಅಡುಗೆ ಸಿಬ್ಬಂದಿಯನ್ನು ಪ್ರಶ್ನಿಸಿದರು. ಆಗ ಅವರು ತಡವರಿಸುತ್ತಾ 20 ಕೆ.ಜಿ. ಎಂದರು. ಅಧಿಕಾರಿಯೇ ಪರವಾಗಿಲ್ಲ 15 ಕೆ.ಜಿ. ಎಂದಿದ್ದಾರೆ. ಅವರನ್ನು ರಕ್ಷಿಸಲು ನೀವು ಮತ್ತಷ್ಟು ಸುಳ್ಳು ಹೇಳುತ್ತಿದ್ದೀರಿ ಎಂದು ಗದರಿದರು. ಬೆಳಗಿನ ಉಪಾಹಾರಕ್ಕೆ ಒಬ್ಬ ವಿದ್ಯಾರ್ಥಿಗೆ 4 ಇಡ್ಲಿ ಕೊಡುವುದಾದರೆ ಒಟ್ಟು 660 ಇಡ್ಲಿ ಮಾಡಬೇಕು. ಆದರೆ 400 ಇಡ್ಲಿ ಮಾತ್ರ ಮಾಡುವುದಾಗಿ ಹೇಳುತ್ತಿದ್ದೀರಿ. ನಿಮ್ಮ ಅಕ್ರಮ ಒಂದೊಂದಾಗಿ ಬಯಲಾಗುತ್ತಿದೆ ಎಂದು ಹಾಸ್ಟೆಲ್ ನೌಕರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿರುವ ಎಲ್ಲರೂ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೂ ವಿದ್ಯಾರ್ಥಿ ಕಮಿಟಿ ರಚನೆಯಾಗಿಲ್ಲ. ಕಮಿಟಿ ರಚಿಸದಂತೆ ಯಾರದ್ದಾದರೂ ಒತ್ತಡ ಇದೆಯಾ ಅಥವಾ ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಾರೆಂಬ ಭಯಕ್ಕೆ ರಚನೆಯಾಗಿಲ್ಲವೇ ಎಂದು ಪ್ರಶ್ನಿಸಿದರು.
ಹಾಸ್ಟೆಲ್‌ನಲ್ಲಿ ಗ್ರಂಥಾಲಯ ಇಲ್ಲ. ಆಟದ ಮೈದಾನವಿದ್ದರೂ ಪರಿಕರಗಳಿಲ್ಲ. ಸೋಲಾರ್ ಇದ್ದರೂ ಬಿಸಿ ನೀರು ಬರುತ್ತಿಲ್ಲ. ಎಲ್ಲಿ ಬೇಕೆಂದರಲ್ಲಿ ದೂಳು ಮೆತ್ತಿದೆ. ಶೌಚಾಲಯದ ಬಾಗಿಲಿಗೆ ಚಿಲಕವಿಲ್ಲ. ಬೆಳಕಿನ ವ್ಯವಸ್ಥೆಯೂ ಇಲ್ಲ. ಕಸ ಗುಡಿಸದೆ ಎಷ್ಟು ದಿನವಾಗಿದೆ ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನಾದರೂ ಪರಿಸ್ಥಿತಿ ಬದಲಾಗದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿ ವಾಪಾಸ್ಸಾದರು.