

ಕೂಡ್ಲಿಗಿ: ಕ್ಷೇತ್ರದಲ್ಲಿನ ಎಲ್ಲ ವಸತಿ ನಿಲಯಗಳನ್ನು ಹೈಟೆಕ್ ಆಗಿ ನಿರ್ಮಾಣ ಮಾಡುವ ಕುರಿತು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಾಣ ಮಾಡಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ವಿಭಜಿತ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಬುಧವಾರ ಮಾತನಾಡಿದರು. ಹೊಸಹಳ್ಳಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೆಲ್ ನಡೆಯುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣ ಮಾಡಲು ಕೆಕೆಆರ್‌ಡಿಬಿ ಅನುದಾನ ಮಂಜೂರಾಗಿದೆ. ಶೀಘ್ರ ಕಾಮಗಾರಿ ಆರಂಭ ಮಾಡಲಾಗುವುದು ಎಂದರು.
ಗುಡೇಕೋಟೆಯಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟಡ ಶಿಥಿಲವಾಗಿದ್ದು, ಅದನ್ನು ಮರು ನಿರ್ಮಾಣ ಮಾಡಲಾಗುವುದು. ಕೂಡ್ಲಿಗಿಯಲ್ಲಿ ಉದ್ಘಾಟನೆ ಮಾಡಿರುವ ಎರಡು ಕಟ್ಟಡಗಳಲ್ಲಿ ಹೆಚ್ಚುವರಿ ಕೊಠಡಿಗಳು ಬೇಕಾಗಿದ್ದು, ಈ ವರ್ಷವೇ ನಿರ್ಮಾಣ ಮಾಡಲಾಗುವುದು. ಇದರ ಜೊತೆಗೆ ಹಾಸ್ಟೆಲ್‌ಗಳಲ್ಲಿ ಮಕ್ಕಳ ಚಟುವಟಿಕೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಕುರಿತು ಪಟ್ಟಿ ನೀಡಬೇಕೆಂದು ಬಿಸಿಎಂ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಎಇಇ ಕೆ. ನಾಗನಗೌಡ, ಜಿಪಂ ಎಇಇ ಮಲ್ಲಿಕಾರ್ಜುನ, ಪ್ರಮುಖರಾದ ಉದಯಜನ್ನು, ಸಿರಬಿ ಅಂಜಿನಪ್ಪ, ರಿಯಾಜ್ ಇತರರಿದ್ದರು.