ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

8
Published on

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಮಾಡುವವರು, ಅಡುಗೆ ಸಹಾಯಕರು ಮತ್ತು ಕಾವಲುಗಾರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.


ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ಹಾಸ್ಟೆಲ್‌ನ ಸಿಬ್ಬಂದಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.


2022ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ಇನ್ನೂ ಜಾರಿ ಮಾಡಿಲ್ಲ. ಇಲ್ಲಿಯವರೆಗಿನ ಅರಿಯರ್ಸ್‌ ನೀಡಿ, ಅದನ್ನು ಅನುಷ್ಠಾನಕ್ಕೆ ತರಬೇಕು. ಕಳೆದ 2-3 ತಿಂಗಳವರೆಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ತಕ್ಷಣವೇ ಪಾವತಿ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.


ಬಾಕಿ ಉಳಿಸಿಕೊಂಡಿರುವ ಪಿಎಫ್ ವಂತಿಗೆಯನ್ನು ತಕ್ಷಣವೇ ಪಾವತಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಏಜೆನ್ಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ರಾಷ್ಟ್ರೀಯ ಹಬ್ಬಗಳು ಹಾಗೂ ನಿರ್ಬಂಧಿತ ರಜಾ ದಿನಗಳು, ವಾರದ ರಜಾ ದಿನಗಳಂದು ಕೆಲಸ ಮಾಡುವ ಕಾರ್ಮಿಕರಿಗೆ ಒಟಿ ಹಣವನ್ನು ಪಾವತಿಸಬೇಕು. ರಜಾದಿನಗಳ ಪಟ್ಟಿಯನ್ನು ಪ್ರತಿ ಹಾಸ್ಟೆಲ್‌ನ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.


ನೇಮಕಾತಿ ಪತ್ರ, ಇಎಸ್‌ಐ ಕಾರ್ಡ್, ವೇತನ ಪಾವತಿ ಚೀಟಿಯನ್ನು ಗುತ್ತಿಗೆದಾರನಿಂದ ಎಲ್ಲ ಕಾರ್ಮಿಕರಿಗೆ ಕೊಡಿಸಬೇಕು. ಸಮಾಜ ಕಲ್ಯಾಣ ಇಲಾಖೆ ತಿ.ನರಸೀಪುರ ತಾಲೂಕಿನಲ್ಲಿ ರಮೇಶ್, ಹುಣಸೂರು ತಾಲೂಕಿನಲ್ಲಿ ರಾಜೇಶ್ ಕುಮಾರ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದು, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.


ಸಮವಸ್ತ್ರವನ್ನು ಕಾರ್ಮಿಕರ ಸ್ವಂತ ಹಣದಿಂದ ಖರೀದಿಸಿ ಧರಿಸುವಂತೆ ಒತ್ತಡ ಹೇರಲಾಗುತ್ತಿದೆ. ಕಾರ್ಮಿಕರಿಗೆ ಉಚಿತವಾಗಿ ಯೂನಿಫಾರ್ಮ್ ನೀಡಬೇಕು. ಇಲ್ಲವೇ ಯೂನಿಫಾರ್ಮ್ ಧರಿಸುವಂತೆ ಕಾರ್ಮಿಕರಿಗೆ ಕಿರುಕುಳ ನೀಡಬಾರದು ಎಂದು ಕಿಡಿಕಾರಿದರು.


ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಿಗೆ ಹಾಜರಾತಿ ಪುಸ್ತಕವನ್ನು ಇಟ್ಟು ಪ್ರತಿದಿನ ಕಾರ್ಮಿಕರಿಂದ ಹಾಜರಾತಿ ನಮೂದಿಸಬೇಕು. ಎಂದು ಆಗ್ರಹಿಸಿದರು.
ಜಿಪಂ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷ ಮುದ್ದುಕೃಷ್ಣ, ಕಾರ್ಯದರ್ಶಿ ಚಂದನ್, ಕಾರ್ಮಿಕ ಮುಖಂಡರಾದ ಮಹದೇವಮ್ಮ, ಎಂ.ವಿ.ಲೋಕೇಶ್, ಶಿವಣ್ಣ, ರಾಜೇಶ್ ಕುಮಾರ್, ಸಂಧ್ಯಾರಾಣಿ, ಧನಲಕ್ಷ್ಮೀ, ಭೀಮನಾಯಕ, ಪಿ.ಟಿ.ಶ್ರೀನಿವಾಸ್, ಚಂದ್ರಯ್ಯ, ರಾಜು, ಬಸವ, ಬಸವರಾಜು, ಮಹದೇವ, ಸಿದ್ದರಾಜು, ಶಿವಮೂರ್ತಿ, ವಿಜಯ ಕುಮಾರ್, ರಕ್ಷಿತ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net