ಹಾಸ್ಟೆಲ್ ಶೌಚಗೃಹದಲ್ಲಿ ವಿದ್ಯಾರ್ಥಿ ಸಾವು

Published on

ಶಿರಾ: ನಗರದ ಬಿಸಿಎಂ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೊಬ್ಬ ಬುಧವಾರ ಬೆಳಗ್ಗೆ ಶೌಚಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಶಿರಾ ತಾಲೂಕು ಪಟ್ಟನಾಯಕನಹಳ್ಳಿ ಸಮೀಪದ ಹೊಸಳ್ಳಿಯ ಭಾಷಾ ಸಾಬ್ ಎಂಬುವವರ ಪುತ್ರ ಮಹಮ್ಮದ್ ರಫಿ ಮೃತ. ಈತ ಶಿರಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲನೇ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ. ವಾರದಿಂದ ಟೈಫಾಯಿಡ್ ಎಂದು ರಜೆಯಲ್ಲಿದ್ದ ರಫಿ ಮಂಗಳವಾರ ಹಾಸ್ಟೆಲ್‌ಗೆ ಬಂದಿದ್ದ ಎನ್ನಲಾಗಿದೆ. ಶೌಚಕ್ಕೆಂದು ಹೋದವನು ವಾಪಸ್ ಬರದಿದ್ದನ್ನು ಗಮನಿಸಿದ ವಿದ್ಯಾರ್ಥಿಗಳು ವಾರ್ಡನ್‌ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ. ವೈದ್ಯರು, ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಮೃತದೇಹವನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಶಾಸಕ ಟಿ.ಬಿ.ಜಯಚಂದ್ರ ಭೇಟಿ ನೀಡಿ ಮಾಹಿತಿ ಪಡೆದರು. ತಹಸೀಲ್ದಾರ್ ಆನಂದ ಕುಮಾರ್, ತಾಪಂ ಇಒ ಹರೀಶ್ ಇದ್ದರು. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net