

ಹಾಸನ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಸಾಕಷ್ಟು ಅವ್ಯವಹಾರ ಮತ್ತು ಅವ್ಯವಸ್ಥೆಯಿಂದ ಕೂಡಿದ್ದು ಇದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ ಶಿವರಾಂ ಆಕ್ರೋಶ ಅವರು ತಮ್ಮ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ನಮ್ಮದೇ, ಸಮಾಜ ಕಲ್ಯಾಣ ಇಲಾಖೆ ಸಚಿವರು ನಮ್ಮ ಆಪ್ತರೇ ಆಗಿದ್ದರೂ ಹಾಸ್ಟೆಲ್ ವ್ಯವಸ್ಥೆ ಸುಧಾರಣೆ ಆಗಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಾನು ಬಹಿರಂಗವಾಗಿ ಮಾತನಾಡುವಂತಾಗಿದೆ. ಬೇಲೂರು ತಾಲೂಕಿನ ಬಿಕ್ಕೋಡು ಹಾಸ್ಟೆಲ್ ವಿದ್ಯಾರ್ಥಿಗಳು ಶಿಕ್ಷಣಕ್ಕಿಂತ ಬೀಡಿ, ಗುಟ್ಕಾ ಸೇವನೆಯಲ್ಲಿ ತೊಡಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಹ ಬಿಡುಗಡೆಯಾಗಿತ್ತು. ನಾನು ಸಮಸ್ಯೆ ತಿಳಿದ ಬಳಿಕ ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯರ ಮೂಲಕ ಎಲ್ಲ ಹಾಸ್ಟೆಲ್ ಗಳಲ್ಲಿ ತನಿಖೆ ನಡೆಸಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
60 ಮಕ್ಕಳಿರಬೇಕಾದ ಹಾಸ್ಟೆಲ್‌ನಲ್ಲಿ ಕೇವಲ 15 ಮಕ್ಕಳಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುತ್ತಿಲ್ಲ. ಈ ಅವ್ಯವಸ್ಥೆ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಅಲ್ಲದೆ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದಿಂದ ಮಾತ್ರ ಒಂದು ಉತ್ತರ ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಂದ ಇಲ್ಲಿಯವರೆಗೆ ಒಂದು ಬಾರಿಯೂ ಉತ್ತರ ಬಂದಿಲ್ಲ. ಇವರು ಎಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದಾರೆ ಎಂಬುದಕ್ಕೆ ಇದು ಉದಾಹರಣೆ. ನಮ್ಮ ಸಚಿವರು, ನಮ್ಮ ಸರ್ಕಾರ, ನಮ್ಮ ಆಪ್ತರ ವಿರುದ್ಧ ಮಾತನಾಡುವ ಅವಶ್ಯಕತೆ ಇರಲಿಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದರು.
ಬೇಲೂರು ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 13 ಹಾಸ್ಟೆಲ್‌ಗಳಿವೆ. 964 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ಹಾಜರಾತಿ ತೀರಾ ಕಡಿಮೆ ಇದೆ. ಒಂದು ದಿನಕ್ಕೆ 55,332 ರೂಪಾಯಿ ಖರ್ಚಾಗುತ್ತಿದೆ. ತಿಂಗಳಿಗೆ 16,5,900 ರೂ. ಒಂದು ವರ್ಷಕ್ಕೆ 1,95,65,000 ಹಣ ಖರ್ಚಾಗುತ್ತಿದೆ. ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಯೋಮೆಟ್ರಿಕ್ ಕೊಟ್ಟು 10 ವರ್ಷವಾದರೂ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಬಯೋಮೆಟ್ರಿಕ್‌ನಲ್ಲಿ ಲೋಪ ಎಸಗಿದ ಹಿನ್ನಲೆಯಲ್ಲಿ ಯಾದಗಿರಿ ಹಾಗೂ ಹುಣಸೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಅಂತಹ ಕೆಲಸ ಬೇಲೂರಿನಲ್ಲಿ ಆಗಬೇಕೆಂದು ಒತ್ತಾಯಿಸಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ವಿಚಾರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿ. 9ರಂದು ಬೇಲೂರಿನಲ್ಲಿ ಸಮಾವೇಶ ಹಮಿಕೊಂಡಿದ್ದೇನೆ. ಸರ್ಕಾರದ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶ ಹೊರತು ಅಸಮಾಧಾನವಲ್ಲ ಎಂದರು.
ಧೈರ್ಯವಿದ್ದರೆ ಪತ್ರಕ್ಕೆ ಸಹಿ ಹಾಕಬೇಕಿತ್ತು
ನಗರದಲ್ಲಿ ಡಿ.5 ರಂದು ಹಮ್ಮಿಕೊಂಡಿರುವ ಸ್ವಾಭಿಮಾನಿ ಸಮಾವೇಶ ರದ್ದುಪಡಿಸುವಂತೆ ಎಐಸಿಸಿಗೆ ಪತ್ರ ಬರೆದಿರುವ ಕುರಿತು ನನಗೆ ಗೊತ್ತಿಲ್ಲ. ಆದರೆ ಪತ್ರ ಬರೆದವರು ಅವರ ಅಭಿಮಾನಿ ಆಗಿದ್ದರೆ ಧೈರ್ಯದಿಂದ ನೇರವಾಗಿ ಹೇಳಬೇಕಿತ್ತು. ಯಾವುದೇ ಸಹಿ ಇಲ್ಲದೆ ಪತ್ರ ಬರೆದರೆ ಹೇಗೆ ನಂಬುವುದು. ಸಿದ್ದರಾಮಯ್ಯ 14 ಬಜೆಟ್ ಮಂಡಿಸಿ, ಎರಡು ಬಾರಿ ಮುಖ್ಯಮಂತ್ರಿ ಆಗಿ ಹಾಗೂ ಐದು ಗ್ಯಾರಂಟಿಗಳ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಂತಹ ನಾಯಕನಿಗೆ ಅಭಿಮಾನಿಗಳು ಇರುವುದು ಸಹಜ. ಹಾಸನ ಸಮಾವೇಶದಲ್ಲಿ ಎರಡು ಲಕ್ಷ ಕಾರ್ಯಕರ್ತರನ್ನು ಸೇರಿಸಲಾಗುವುದು ಎಂದು ಬಿ.ಶಿವರಾಂ ಹೇಳಿದರು.