

ಮೈಸೂರು: ಕ್ರೀಡೆಯಲ್ಲಿ ಗೆಲುವು, ಕೀರ್ತಿ ಬರಬೇಕಾದರೆ ವಿದ್ಯಾರ್ಥಿಗಳು ನಿರಂತರ ಶ್ರದ್ಧೆಯಿಂದ ಸಾಧನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಡಾ.ಪ್ರೇಮ್‌ಕುಮಾರ್ ತಿಳಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಸತಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಹಾಗೂ ನೌಕರರ ವಿಭಾಗ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಎಲ್ಲ ಕ್ಷೇತ್ರದಲ್ಲಿಯೂ ಇಂದು ಪ್ರಗತಿಯತ್ತ ಮುನ್ನಡೆದಿದೆ. ಕ್ರೀಡೆಯಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದು, ಇನ್ನಷ್ಟು ಬೆಳೆಯಬೇಕಿದೆ. ಹಾಗಾಗಿ ಎಲ್ಲ್ಲ ಯುವಕ, ಯುವತಿಯರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅದರೊಂದಿಗೆ ದೇಶದ ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು.
ನಗರಪಾಲಿಕೆಯ ಹೆಚ್ಚುವರಿ ಆಯುಕ್ತ ಜಿ.ಎಸ್. ಸೋಮಶೇಖರ್ ಮಾತನಾಡಿ, ಸಚಿನ್ ತೆಂಡುಲ್ಕರ್, ಧೋನಿ ಅವರಂತೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬೇಕು. ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರ ಉನ್ನತ ಹುದ್ದೆಗಳನ್ನು ನೀಡುತ್ತಿದೆ. ಇದಕ್ಕೆ ಕ್ರೀಡಾಪಟು ಧನುಷಾ ಅವರೇ ಸಾಕ್ಷಿ ಎಂದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎನ್. ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಕ್ರೀಡೆ ಮುಖ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದಾದರೊಂದು ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬೇಕು ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಧನುಷಾ, ಜಿಲ್ಲಾ ಸಮನ್ವಯ ಅಧಿಕಾರಿ ಹೇಮ್‌ಕುಮಾರ್, ಪ್ರಾಂಶುಪಾಲ ಎಚ್.ಎನ್. ಪ್ರಸನ್ನಕುಮಾರ್, ಅಧಿಕಾರಿಗಳಾದ ಗಣಪತಿ ಜಕಾತಿ, ಆಶಾ ಟಿ.ಜಿ., ಗಣೇಶ್, ಯೋಗೀಶ್, ಮಲ್ಲಿಕಾರ್ಜುನ್, ಎನ್.ಎಸ್. ಪದ್ಮ್ಮಾ ಇತರರು ಇದ್ದರು.