

ಮೈಸೂರು: ಹಾಸ್ಟೆಲ್ ಬಲವರ್ಧನೆಗೆ ರಾಜ್ಯ ವ್ಯಾಪಿ ಕೈಗೊಂಡಿರುವ ಎಸ್‌ಎಫ್‌ಐ ಶೈಕ್ಷಣಿಕ ಜಾಥಾ ಸೋಮವಾರ ನಗರಕ್ಕೆ ಆಗಮಿಸಿತು.
ಭಾರತ ವಿದ್ಯಾರ್ಥಿ ಫೆಡರೇಷನ್ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಕೈಗೊಂಡಿರುವ ಜಾಥಾಕ್ಕೆ ಅಕ್ಟೋಬರ್ 13ರಂದು ದಾವಣಗೆರೆಯಲ್ಲಿ ಚಾಲನೆ ದೊರೆತಿತ್ತು. ಎಸ್‌ಎಫ್‌ಐ ಜಿಲ್ಲಾ ಮುಖಂಡರು ಜಾಥಾವನ್ನು ಸ್ವಾಗತಿಸಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳ ಬಹಿರಂಗ ಸಭೆ ನಡೆಸಿದರು.
ರಾಜ್ಯ ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿಗೊಳಿಸಬೇಕು. ರಾಜ್ಯ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ರಾಜ್ಯದ ಖಾಸಗಿ ಶಾಲಾ ಕಾಲೇಜುಗಳ ಡೊನೇಷನ್ ನಿಯಂತ್ರಣಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿರುವ 30 ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಬೇಕು. ಶಿಕ್ಷಣಕ್ಕಾಗಿ ಕೊಠಾರಿ ಆಯೋಗದ ಶಿಫಾರಸಿನಂತೆ ರಾಜ್ಯ ಬಜೆಟ್‌ನಲ್ಲಿ ಶೇ.30, ಕೇಂದ್ರ ಬಜೆಟ್‌ನಲ್ಲಿ ಶೇ.10, ಜಿಡಿಪಿಯಲ್ಲಿ ಶೇ.6ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಬೇಕು. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಲಿಂಗ ಸಂವೇದನಾ ಸಮಿತಿ, ಆಂತರಿಕ ದೂರು ಸಮಿತಿ ರಚಿಸಬೇಕು. ರಾಜ್ಯದಲ್ಲಿ ಹಾಸ್ಟೆಲ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಮಾಸಿಕ ಆಹಾರ ಭತ್ಯೆ 4,500 ರೂ.ಗೆ ಹೆಚ್ಚಿಸಬೇಕು. ಈ ವಿದ್ಯಾರ್ಥಿಗಳಿಗೆ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಕಾನೂನು ಕಾಲೇಜುಗಳ ಸ್ಥಾಪನೆ ಮಾಡಬೇಕು. ಪದವಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು. ರಾಜ್ಯದಲ್ಲಿ ಖಾಲಿ ಇರುವ 59,772 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಲಾಯಿತು.
ಎಲ್ಲ ಹಾಸ್ಟೆಲ್‌ಗಳಲ್ಲಿ ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು ಮೂಲಸೌಕರ್ಯ ಒದಗಿಸಬೇಕು. ರಾಜ್ಯದಲ್ಲಿ ಕಳೆದ 3 ವರ್ಷದಿಂದ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು.
ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಫ್ ಹೆಚ್ಚಿಸಬೇಕು. ರಾಜ್ಯದಲ್ಲಿ ಖಾಲಿ ಇರುವ 2.72 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಣದಲ್ಲಿ ಕೇಂದ್ರೀಕರಣ, ಕೇಸರಿಕರಣ, ಖಾಸಗೀಕರಣವನ್ನು ಕೈಬಿಡಬೇಕು. ಸರ್ವರಿಗೂ ಸಮಾನ ಶಿಕ್ಷಣ ಮತ್ತು ಸರ್ವರಿಗೂ ಉದ್ಯೋಗಕ್ಕಾಗಿ ಕಲ್ಪಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರದ್ದುಪಡಿಸಿ ರಾಷ್ಟ್ರೀಯ ಶಿಕ್ಷಣ ಪರೀಕ್ಷಾ ಸೇವಾ ಪ್ರಾಧಿಕಾರ ಸ್ಥಾಪನೆ ಮಾಡಬೇಕು. ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ವಾರ್ಡನ್, ಪ್ರಾಂಶುಪಾಲರು, ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಲಾಯಿತು.
ವಿದ್ಯಾರ್ಥಿಗಳ ಬಹಿರಂಗ ಸಭೆಯನ್ನು ರಂಗಕರ್ಮಿ ಜನಾರ್ದನ್(ಜನ್ನಿ) ಉದ್ಘಾಟಿಸಿದರು. ಪೀಪಲ್ ಲೀಗಲ್ ಪೋರಂ ನಿರ್ದೇಶಕ ಬಾಬುರಾಜ್, ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಶಿವಪ್ಪ, ರಾಜ್ಯ ಕಾರ್ಯದರ್ಶಿ ವಿಜಯ್‌ಕುಮಾರ್, ಮುಖಂಡರಾದ ಅರ್ಪಿತಾ ಗ್ರೇಸಿ, ಮಣಿ ಭಾರದಿ, ಡಿ.ಅಭಿ, ಟಿ.ಪ್ರಜ್ವಲ್, ಭರತ್, ಚಿರಾಗ್, ಎಸ್.ಕೆ.ಮೂರ್ತಿ, ಜೀವನ್, ಪ್ರಿಯಾ, ವಿನುತ್, ಎಸ್.ಅಭಿಷೇಕ್, ತೇಜಸ್, ಅರವಿಂದ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.