ಹಾಸ್ಟೆಲ್ ಧ್ವಂಸ ಕಾರ್ಯಾಚರಣೆ ಸ್ಥಗಿತ

22-GPT-2
ಗುಂಡ್ಲುಪೇಟೆ ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ನೆಲಸಮ ಕಾರ್ಯಾಚರಣೆಯಿಂದಾಗುತ್ತಿರುವ ಅನಾನುಕೂಲದ ಬಗ್ಗೆ ನಿವಾಸಿಗಳು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
Published on

ಗುಂಡ್ಲುಪೇಟೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾಸ್ಟೆಲ್ ಕಟ್ಟಡ ಧ್ವಂಸ ಕಾರ್ಯಾಚರಣೆಯನ್ನು ಸಮಾಜ ಕಲ್ಯಾಣ ಇಲಾಖೆ ಕೈಬಿಟ್ಟಿದೆ.

ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ಅಪೂರ್ಣವಾಗಿದ್ದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ಕಾಮಗಾರಿಯನ್ನು ಪೂರ್ಣಗೊಳಿಸದೆ ಕಳೆದ ಒಂದು ವಾರದಿಂದ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯಾಚರಣೆ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದ ಪರಿಣಾಮ ಕಟ್ಟಡವನ್ನು ಒಡೆಯುತ್ತಿದ್ದ ಯಂತ್ರದ ಶಬ್ದ ಹಾಗೂ ಧೂಳಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಸುತ್ತಮುತ್ತಲಿನ ನಿವಾಸಿಗಳು ಕಾಮಗಾರಿಗೆ ಬುಧವಾರ ಸಂಜೆ ತಡೆಯೊಡ್ಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಯಿತು.

ಯಂತ್ರಗಳ ಕಾರ್ಯಾಚರಣೆಯಿಂದ ಅಕ್ಕಪಕ್ಕದ ಮನೆಗಳಿಗೆ ಧೂಳು ವ್ಯಾಪಿಸಿ ಆಸ್ತಮಾ ರೋಗಿಗಳು ಹಾಗೂ ಮಕ್ಕಳಿಗೆ ಉಸಿರಾಟದ ಸಮಸ್ಯೆ ತಲೆದೋರಿದೆ.

ಮನೆಯೊಳಗೆ ಧೂಳು ತುಂಬಿ ಅನೈರ್ಮಲ್ಯ ಉಂಟಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಪುರಸಭೆಯವರು ಇತ್ತ ತಲೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನಮ್ಮ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಗುಣಮಟ್ಟದ ಕಾಮಗಾರಿ ನಡೆಸಿಲ್ಲ ಎಂದು ಸಂಬಂಧಿಸಿದ ಇಂಜಿನಿಯರ್ ವರದಿ ನೀಡಿದ್ದರಿಂದ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಟೆಂಡರ್ ನೀಡಲಾಗಿದೆ. ಆದ್ದರಿಂದ ಗುತ್ತಿಗೆದಾರ ನೆಲಸಮ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ನಂಜುಂಡೇಗೌಡ ಹೇಳಿದರು. ಇದರಿಂದ ಸಾರ್ವಜನಿಕರು ಮತ್ತಷ್ಟು ಕೆರಳಿದರು.

ಗುಣಮಟ್ಟದ ಕಬ್ಬಿಣ ಸಿಮೆಂಟ್ ಬಳಸಿ ನಿರ್ಮಿಸುತ್ತಿದ್ದ ಅತ್ಯಂತ ಸುಭದ್ರವಾಗಿದ್ದರೂ ಕಳಪೆ ಗುಣಮಟ್ಟ ಎಂದು ನಿರ್ಧರಿಸಿದ್ದೇಕೆ. ಚೆನ್ನಾಗಿದ್ದ ಕಟ್ಟಡವನ್ನು ಏಕೆ ನೆಲಸಮ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕೆ ವೆಚ್ಚವಾಗಿರುವ ಹಣಕ್ಕೆ ಯಾರು ಹೊಣೆ. ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಇಂಜಿನಿಯರ್ ಏನು ಮಾಡುತ್ತಿದ್ದರು. ಗುತ್ತಿಗೆದಾರನಿಗೆ ಬಿಲ್ ನೀಡಿರಲಿಲ್ಲವೇ ಎಂದು ಪ್ರಶ್ನೆಗಳ ಸುರಿಮಳೆ ಗೈದರು.

ಸುಭದ್ರವಾಗಿದ್ದ ಕಟ್ಟಡವನ್ನು ಕಮಿಷನ್ ಆಸೆಗಾಗಿ ಕೆಡವಲಾಗುತ್ತಿದೆ. ಕಟ್ಟಡ ನೆಲಸಮ ಮಾಡಲು ಪುರಸಭೆ ಅನುಮತಿ ನೀಡಿದೆಯೇ, ನೀಡಿದ್ದರೆ ಲೈಸೆನ್ಸ್ ತೋರಿಸಿ, ಇಲ್ಲದೇ ಕಾಮಗಾರಿ ನಿಲ್ಲಿಸಿ. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಉಪನಿರ್ದೇಶಕರ ಕಚೇರಿಗೆ ಪತ್ರ ಬರೆಯುವುದಾಗಿ ತಿಳಿಸಿದ ನಂಜುಂಡೇಗೌಡ ಕೂಡಲೇ ಕಾರ್ಯಾಚರಣೆ ನಿಲ್ಲಿಸಲು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net