

ಹಾಸನ: ಸಪ್ತಮಾತೃಕೆಯರು ವಾಯು ವಿಹಾರಕ್ಕೆ ಬಂದು ಜಿಲ್ಲೆಯಲ್ಲಿ ನಡೆಸಿದ್ದಾರೆ. ಅವರ ಹೆಸರಿನಲ್ಲಿ ಜಿಲ್ಲಾಡಳಿತ ವ್ಯವಹಾರ ಮಾಡುವ ಮೂಲಕ ಭಕ್ತರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ನಗರ ಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಎದುರಿನ ವಿವಿಐಪಿ ಗೇಟ್ ಮುಂಭಾಗ ಜಮಾಯಿಸಿದ ನಗರಸಭೆ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ವಿವಿಐಪಿ ಪಾಸ್‌ಗಳನ್ನು ಬೇಕಾಬಿಟ್ಟಿ ಹಂಚಿದ್ದಾರೆ. ಧರ್ಮದರ್ಶನ ಸಾಲಿನಲ್ಲಿ ನಿಲ್ಲುವವರಿಗಿಂತ ಪಾಸ್ ಹಿಡಿದು ನಿಂತವರೇ ಹೆಚ್ಚಿದ್ದಾರೆ. ಪಾಸ್ ನೆರವಿನಿಂದ ಬೇಗ ದರ್ಶನ ಪಡೆಯಬೇಕೆಂದವರು ಐದಾರು ಗಂಟೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇಷ್ಟೊಂದು ಪಾಸ್‌ಗಳ ಹಂಚಿಕೆ ಮಾಡಿದ್ದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತದ ಅವೈಜ್ಞಾನಿಕ ನಿರ್ಧಾರದಿಂದ ಹಾಸನಾಂಬ ಜಾತ್ರೆ ಸಮಸ್ಯೆಗಳ ಆಗರವಾಗಿದ್ದು ನಗರಸಭೆ ಚುನಾಯಿತ ಪ್ರತಿನಿಧಿಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ.ಹಾಸನಾಂಬ ಜಾತ್ರೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಹಲವು ವರ್ಷಗಳಿಂದ ನಗರಸಭೆ ಚುನಾಯಿತ ಪ್ರತಿನಿಧಿಗಳನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಗರಸಭೆ ಸದಸ್ಯರಿಗೂ ಭದ್ರತಾ ಸಿಬ್ಬಂದಿ ಪ್ರವೇಶ ನೀಡುತ್ತಿಲ್ಲ ಎಂದು ದೂರಿದರು.
ಬಹುಪಾಲು ಭಕ್ತರು ತುಮಕೂರು ಜಿಲ್ಲೆಯವರೇ ಆಗಿದ್ದಾರೆ. ಉಸ್ತುವಾರಿ ಸಚಿವರು ತಮ ಕ್ಷೇತ್ರದ ಜನರ ಓಲೈಕೆಗಾಗಿ ಬೇಕಾಬಿಟ್ಟಿ ಪಾಸ್ ಹಂಚಿದ್ದಾರೆ. ಭಕ್ತರನ್ನು ಬಿಡುವ ವಿಚಾರಕ್ಕೆ ಜಿಲ್ಲಾಧಿಕಾರಿ ಹಾಗು ಪೊಲೀಸ್ ಅಧಿಕಾರಿಗಳು ಪರಸ್ಪರ ವಾಗ್ದಾಳಿ ನಡೆಸಿದ್ದು, ರಾಜ್ಯಾದ್ಯಂತ ಜಿಲ್ಲೆಯ ಮರ್ಯಾದೆ ಹಾಳು ಮಾಡಿದ್ದಾರೆ. ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಹಂಕಾರ ವರ್ತನೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಮೇಲಟ್ಟದ ಯಾವ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಹಾಸನಾಂಬ ಮಹೋತ್ಸವವನ್ನು ಕುಟುಂಬದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಿ ದರ್ಶನಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿಯಿದ್ದು ನಗರಸಭೆ ಚುನಾಯಿತ ಪ್ರತಿನಿಧಿಗಳು, ಪೌರ ಕಾರ್ಮಿಕರು ಹಾಗು ಸಿಬ್ಬಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಸದಸ್ಯರಾದ ಮೋಹನ್, ಕೃಷ್ಣಮೂರ್ತಿ, ಯೋಗೇಂದ್ರ ಬಾಬು, ಮಂಜುನಾಥ್, ರಫೀಕ್, ನಾಗೇಶ್ ಇತರರಿದ್ದರು.