

ಹಾಸನ: ಹಾಸನಾಂಬೆ ದೇವಿ ದರ್ಶನ 2022 ಮುಗಿದು ಮತ್ತೆ ಬಾಗಿಲು ತೆಗೆಯುವ ಸಮಯ ಬರುತ್ತಿದ್ದರೂ ಆ ವೇಳೆ ಕಾರ್ಯಕ್ರಮ ನೀಡಿದ ಕಲಾವಿದರ ಹಣ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ. ಇನ್ನೊಂದು ವಾರದಲ್ಲಿ ನಮ್ಮ ಹಣ ಬಿಡುಗಡೆ ಮಾಡದಿದ್ದರೆ ಎಸಿ ಕಚೇರಿ ಮುಂದೆ ವಿವಿಧ ವಾದ್ಯಗೋಷ್ಠಿಯೊಂದಿಗೆ ಪ್ರತಿಭಟನೆ ಮಾಡುವುದಾಗಿ ನೊಂದ ಕಲಾವಿದರು ಎಚ್ಚರಿಕೆ ನೀಡಿದರು.
ನಗರದ ಕಲಾಭವನದ ಆವರಣದಲ್ಲಿ ನೊಂದ ಕಲಾವಿದರಾದ ಯಲಗುಂದ ಶಾಂತಕುಮಾರ್ ಅವರು ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದೇವಿ ದರ್ಶನದ ವೇಳೆ ಕಲಾವಿದರಿಂದ ಅನೇಕ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜನೆ ಮಾಡಲಾಗುತ್ತದೆ. ಅದರಂತೆ 2022 ಅಕ್ಟೋಬರ್ ತಿಂಗಳಲ್ಲಿ ನಡೆದ ಹಾಸನಾಂಬೆ ಮತ್ತು ಸಿದೇಶ್ವರ ಜಾತ್ರಾ ಮಹೋತ್ಸವದಲ್ಲಿ ನಮ್ಮಿಂದ ರಂಗ ಗೀತೆಗಳು, ಜಾನಪದ ಗೀತೆ, ಸುಗಮ ಸಂಗೀತ, ವಾದ್ಯಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಾವು ನೀಡಿದ್ದೆವು. ಪ್ರತಿ ಕಲಾವಿದನಿಗೂ 5 ಸಾವಿರ ರೂ. ಸಂಭಾವನೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಗದಿಪಡಿಸಿತ್ತು. ಆದರೆ ಎಂಟು ತಿಂಗಳು ಕಳೆದರೂ ನಮಗೆ ನೀಡಬೇಕಾದ ಹಣ ನೀಡಿಲ್ಲ ಎಂದು ದೂರಿದರು.
ನಮ್ಮ ಪಟ್ಟಿಯನ್ನು ಉಪವಿಭಾಗಾಧಿಕಾರಿಗೆ ನೀಡಿದ್ದು, ನಾವು ಇಲ್ಲಿಯವರೆಗೂ ಎಸಿ ಕಚೇರಿಗೆ ಅಲೆದಾಡುತ್ತಲೆ ಇದ್ದೇವೆ. ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರೆಗೆ ಭಕ್ತರಿಂದ ಕೋಟ್ಯಂತರ ರೂ. ಸಂಗ್ರಹವಾಗಿದೆ. ಇವರು ಸರ್ಕಾರದ ಹಣ ಕೊಡಬೇಕಾಗಿಲ್ಲ. ಭಕ್ತರಿಂದ ಸಂಗ್ರಹವಾಗುವ ಹಣದಲ್ಲೇ ನಮಗೆ ಹಣ ನೀಡಬಹುದು. ಆದರೆ ಹಣ ಬಿಡುಗಡೆ ಮಾಡುವುದಕ್ಕೆ ಎಸಿ ಕಚೇರಿಯಲ್ಲಿ ತಡ ಮಾಡಿ ಕಲಾವಿದರಿಗೆ ವಿನಾಃಕಾರಣ ತೊಂದರೆ ಕೊಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಕಲಾವಿದ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗ್ಯಾರಂಟಿ ರಾಮಣ್ಣ ಮಾತನಾಡಿ, ಹಾಸನಾಂಬ ದೇವಿ ಜಾತ್ರೆ ಮುಗಿದು 2023ರ ಜಾತ್ರೆ ಮತ್ತೆ ಬರುತ್ತಿದ್ದರೂ ಇದುವರೆಗೂ ನಮ್ಮ ಹಣ ಕೊಟ್ಟಿಲ್ಲ. ಅನೇಕರು ಕೈಯಿಂದ ಹಣ ಹಾಕಿ ತಮ್ಮ ಕಲೆ ಪ್ರದರ್ಶನ ಮಾಡಿದ್ದಾರೆ. ಇಷ್ಟೊಂದು ಅನ್ಯಾಯವನ್ನು ಯಾರು ಮಾಡಬಾರದು. ಚುನಾವಣೆ ಮುಗಿದಿದ್ದು, ಮತ್ತೆ ಯಾವ ನೆಪ ಇದೆ. ಇನ್ನೊಂದು ವಾರದೊಳಗೆ ಕಾರ್ಯಕ್ರಮ ನೀಡಿದ ಕಲಾವಿದರ ಬಿಲ್ ಬಿಡುಗಡೆ ಮಾಡದೇ ಇದ್ದರೆ ನಮ್ಮಲ್ಲಿರುವ ಎಲ್ಲ ವಾದ್ಯಗೋಷ್ಠಿಗಳೊಂದಿಗೆ ಬಂದು ವಾದ್ಯ ನುಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಕಲಾವಿದರಾದ ಚೆಲುವನಹಳ್ಳಿ ಶೇಖರಪ್ಪ, ದೇವೇಗೌಡರಯ್ಯ, ನಾದಸ್ವರದ ಶಿವಲಿಂಗೇಗೌಡ, ಮಹಂತೇಶ್, ವಿಜಯಕುಮಾರ್, ಶಿವನಂಜೇಗೌಡ, ಚಂದ್ರಶೇಖರ್, ರಮೇಶ್, ಪ್ರಸಾದ್ ಇತರರು ಉಪಸ್ಥಿತರಿದ್ದರು.