

ಹಾಸನ: ಶಕ್ತಿದೇವತೆ ಹಾಸನಾಂಬೆ ಸಾರ್ವಜನಿಕ ದರ್ಶನದ ಕೊನೆಯ ದಿನವಾಗಿದ್ದ ಬುಧವಾರ ಬೆಳಗ್ಗೆ 6 ಗಂಟೆಯಿಂದ ಮರುದಿನ ಗುರುವಾರ ಬೆಳಗ್ಗೆ 7 ಗಂಟೆಯವರೆಗೆ ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಟಿಕೆಟ್ ಪಡೆದು ವಿಶೇಷ ದರ್ಶನ ಮಾಡುವವರು ಮತ್ತು ಪಾಸ್ ಪಡೆದು ಬಂದಿದ್ದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಸಾಮಾನ್ಯ ಸರತಿ ಸಾಲಿನಲ್ಲಿ ನಿಂತರವರು ದೇವಿಯ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವಂತಾಯಿತು. ಬೆಂಗಳೂರು ಆನೆಕಲ್ ನಿವಾಸಿ ಮಂಜುನಾಥ್ (68) ಎಂಬುವರು ಬುಧವಾರ ಬೆಳಗ್ಗೆ 8 ಗಂಟೆಗೆ ಸರದಿ ಸಾಲಿನಲ್ಲಿ ನಿಂತವರು ಸತತ ಮೂರೂವರೆ ಗಂಟೆಗಳ ಕಾಲ ಸಾಲಿನಲ್ಲಿ ಸಾಗಿ 11.30 ವರೆಗೆ ದರ್ಶನ ಪಡೆದು ಹಿಂದಿರುಗುವಾಗ ಸುಸ್ತಾಗಿ ದೇವಸ್ಥಾನದ ಆವರಣದಲ್ಲಿಯೇ ಕುಸಿದು ಬಿದ್ದರು. ತಕ್ಷಣ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಸಿಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಬುಧವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಮ್ಮ ಪತ್ನಿ ಪಲ್ಲವಿ ಅವರೊಂದಿಗೆ ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿ ಹಾಸನಾಂಬೆ ಮತ್ತು ಸಿದ್ದೇಶ್ವರಸ್ವಾಮಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಪ್ರೀತಂಗೌಡ ಜೊತೆಯಲ್ಲಿದ್ದರು.
ರುಚಿಕರ ಪ್ರಸಾದ:
ಹಾಸನಾಂಬೆ ದೇವಿ ದರ್ಶನೋತ್ಸವ ಆರಂಭವಾದಾಗಿನಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದು, ಎಲ್ಲ ಭಕ್ತರಿಗೂ ನಿತ್ಯ ರುಚಿಕರ ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದು ಭಕ್ತರ ಮೆಚ್ಚುಗೆಗೆ ಕಾರಣವಾಯಿತು. ‘ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ಮಾಡಲಾಗಿದೆ. ಪ್ರಸಾದ ಸಿದ್ಧಪಡಿಸುವ ಗುತ್ತಿಗೆಯನ್ನು ನಮಗೆ ನೀಡಿದ್ದು, ಆಹಾರ ಇಲಾಖೆ ಉಪ ನಿರ್ದೇಶಕ ಸಂಜಯ್ ಮತ್ತು ಸಿಬ್ಬಂದಿಯವರ ಪರಿಶ್ರಮದಲ್ಲಿ ವಿವಿಧ ರೀತಿಯ ಪ್ರಸಾದ ತಯಾರಿಸಿ ಭಕ್ತರಿಗೆ ಕೊಡಲಾಗುತ್ತಿದೆ. ಪುಳಿಯೊಗರೆ, ಪುಲಾವ್, ಚಿತ್ರಾನ್ನ, ಪೊಂಗಾಲ್, ಬಿಸಿಬೇಳೆ ಬಾತ್, ಟೊಮೊಟೊ ಬಾತ್, ವಾಂಗಿಬಾತ್, ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು ಮತ್ತಿತರ ರಚಿಕರ ಪ್ರಸಾದ ತಯಾರಿಸಿ ವಿತರಿಸಿದ್ದೇವೆ’ ಎಂದು ಗುತ್ತಿಗೆದಾರ ಪ್ರೀತಿವರ್ಧನ್ ತಿಳಿಸಿದರು.
ಸಿದ್ದೇಶ್ವರಸ್ವಾಮಿ ಚಂದ್ರಮಂಡಲೋತ್ಸವ:
ಹಾಸನಾಂಬೆ ದೇವಾಲಯದ ಆವರಣದಲ್ಲೇ ಇರುವ ಸಿದ್ದೇಶ್ವರಸ್ವಾಮಿ ಚಂದ್ರಮಂಡಲೋತ್ಸವವು ಬುಧವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ನಂತರ ದೇವಿಗೆರೆಯಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಬೆಳಗಿನ ಜಾವ ದೇವಾಲಯದ ಮುಂಭಾಗ ಕೆಂಡೋತ್ಸವ ನಡೆಸಲಾಯಿತು.
ಈ ಬಾರಿ ದರ್ಶನ ಪಡೆದ ಗಣ್ಯರು:
ಕೇಂದ್ರಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಬಿ.ಸಿ. ನಾಗೇಶ್, ಶಶಿಕಲಾ ಜೊಲ್ಲೆ, ಎಚ್.ಟಿ. ಸೋಮಶೇಖರ್, ಬಿ. ಶ್ರೀರಾಮುಲು, ಬೈರತಿ ಬಸವರಾಜ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದರಾದ ಪ್ರತಾಪ್ ಸಿಂಹ, ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಡಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಎಚ್.ಕೆ. ಕುಮಾರಸ್ವಾಮಿ, ಎಲ್. ನಾಗೇಂದ್ರ, ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಎ. ಮಂಜು, ಸಾಹಿತಿ ಡಾ. ಎಸ್.ಎಲ್. ಭೈರಪ್ಪ, ರಾಜ್ಯ ಸರ್ಕಾರದ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ, ಚಲನಚಿತ್ರ ಕಲಾವಿದರಾದ ಶೃತಿ, ಅನಿರುದ್ಧ, ತಾರಾ, ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಇಸ್ರೋ ಮಾಜಿ ಅಧ್ಯಕ್ಷ ಎಚ್.ಎ. ಕಿರಣ್ ಕುಮಾರ್, ಮಾಜಿ ಶಾಸಕ ವೈ.ಎಸ್.ವಿ. ದತ್ತ ಮತ್ತಿತರ ಗಣ್ಯರು ೀ ಬಾರಿ ಹಾಸನಾಂಬೆ ದರ್ಶನ ಪಡೆದವರಲ್ಲಿ ಸೇರಿದ್ದಾರೆ.