ಹಾಸನಾಂಬೆ ದೇವಿ ದರ್ಶನಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

ಹಾಸನಾಂಬೆ ದೇವಿ ದರ್ಶನಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ
Published on

ಹಾಸನ : ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಪಾರ ಪ್ರಮಾಣದಲ್ಲಿ ಹರಿದುಬರುತ್ತಿರುವ ಭಕ್ತ ಸಾಗರಕ್ಕೆ ದೇವಿಯ ದರ್ಶನ ಮಾಡಿಸುವಲ್ಲಿ ಪೊಲೀಸರು ಹಾಗೂ ಜಿಲ್ಲಾಡಳಿತ ಹೆಣಗಾಡುತ್ತಿರುವುದು ಕಂಡು ಬರುತ್ತಿದೆ. ನಿರೀಕ್ಷೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದು 1000 ರೂ.ಗಳ ಟಿಕೆಟ್‌ನ ವಿಶೇಷ ದರ್ಶನದ ಸರತಿಸಾಲೇ ಕಿ.ಮೀ. ಉದ್ದಕ್ಕೆ ಬೆಳೆಯುತ್ತಿದೆ.

ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಸಂಜೆ 3.30 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ದರ್ಶನ ಅವಕಾಶ ಇರುವುದರಿಂದ ಭಕ್ತರ ಒತ್ತಡ ಹೆಚ್ಚುತ್ತಿದೆ. ಈ ಹಿಂದಿನಂತೆ ಹಗಲು-ರಾತ್ರಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ನೂಕುನುಗ್ಗಲು ಕಡಿಮೆ ಆಗುತ್ತದೆ ಎಂಬುದು ಭಕ್ತರ ಮನವಿ ಆಗಿದೆ.

ಗಣ್ಯರು, ಅತಿಗಣ್ಯರ ಭೇಟಿ ಸಂದರ್ಭದಲ್ಲಿ ಅವರೊಂದಿಗೆ ನೂರಾರು ಮಂದಿ ಅವರ ಹಿಂಬಾಲಕರೂ ದೇವಸ್ಥಾನದ ಒಳಗೆ ನುಗ್ಗುವುದರಿಂದ ಅವರು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗುತ್ತಿದೆ. ಈ ಸಂದರ್ಭದಲ್ಲಿ ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದೇವಿಯ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೂ ತೊಂದರೆ ಆಗುತ್ತಿದೆ.

ಗಣ್ಯರಿಂದ ದರ್ಶನ:
ಮಂಗಳವಾರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಾಸನಾಂಬೆ- ಸಿದ್ದೇಶ್ವರನ ಕೃಪೆಗೆ ಒಳಗಾಗಿದ್ದೇವೆ, ದರ್ಶನ ಪಡೆದು ಸಂತೋಷವಾಗುತ್ತಿದೆ. ಹಿಂದೂ ಧರ್ಮದ ಸಂಪ್ರದಾಯದ ಈ ವ್ಯವಸ್ಥೆ ಭಗವಂತನ ಮುಂದೆ ನಾವೆಲ್ಲರೂ ಸಮಾನರು ಎಂಬುದನ್ನು ತೋರಿಸುತ್ತದೆ. ಹಾಸ ನಾಂಬೆ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ಜನ ಸಂತೃಪ್ತಿಯಾಗಿ ಜೀವನ ನಡೆಸುವ ವಿಶ್ವಾಸವಿದೆ ಎಂದರು.
ಮಾಜಿ ಸಚಿವ ಎ. ಮಂಜು, ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮತ್ತಿತರ ಗಣ್ಯರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಮಠಾಧೀಶರ ಭೇಟಿ:
ಕೊಡಗಿನ ಕಿರಿಕೋಡ್ಲಿ ಮಠದ ಸದಾಶಿವ ಸ್ವಾಮೀಜಿ, ಹಾಸನ ನಗರದ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಅರೇಮೇರಿ ಮಠ, ತೊರೆನೂರು ಮಠ, ಹುಬ್ಬಳಿ ಮಠ, ಮನೆಹಳ್ಳಿಮಠ, ಕರ್ತಾಳು ಮಠ, ಬಸವಾಪಟ್ಟಣ ಮಠ, ಚಿಲುಮೆ ಮಠ, ದಿಂಡಗಾಡು ಮಠ ಸೇರಿದಂತೆ ಹತ್ತಕ್ಕೂ ಹೆಚ್ಚು ಮಠಾಧೀಶರು ಮಂಗಳವಾರ ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಆಟೋ ಸೇವೆ:
ಹಾಸನಾಂಬೆ ದರ್ಶನಕ್ಕಾಗಿ ದೂರದ ಊರುಗಳಿಂದ ಬರುವ ವೃದ್ಧರು ಮತ್ತು ಅಂಗವಿಕಲ ಭಕ್ತರಿಗೆ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ದೇವಸ್ಥಾನದವರೆಗೆ ಉಚಿತ ಆಟೋರೀಕ್ಷಾ ಸೇವೆಯನ್ನು ವಿವಿಧ ಸಂಘಸಂಸ್ಥೆಗಳು ಮತ್ತು ರಾಜಕೀಯ ಮುಖಂಡರು ಕಲ್ಪಿಸಿರುವುದು ವಿಶೇಷವಾಗಿದೆ.

ಭಕ್ತ ಮಂಡಳಿಯಿಂದ ಅನ್ನಸಂತರ್ಪಣೆ:
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದು ಹೊರಬರುವ ಸಾವಿರಾರು ಭಕ್ತರಿಗೆ ವಿವಿಧ ಸಂಘಸಂಸ್ಥೆಗಳು ಮತ್ತು ದೇವಾಲಯದ ಆಡಳಿತ ಮಂಡಳಿಯು ಉಚಿತವಾಗಿ ಪ್ರಸಾದ ವಿತರಿಸುತ್ತಿದೆ. ಮಂಗಳವಾರ ಪುಳಿಯೊಗರೆ, ಪಲಾವ್, ಪೊಂಗಲ್ ಮತ್ತಿತರ ಪ್ರಸಾದ ವಿತರಿಸಲಾಯಿತು.

ನಾಲ್ಕು ದಿನಗಳಿಗೆ ಅರ್ಧಕೋಟಿ ಮೀರಿದ ಆದಾಯ:
ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಅ.13ಕ್ಕೆ ತೆರೆಯಲಾಯಿತಾದರೂ ಸಾರ್ವಜನಿಕ ದರ್ಶನ ಆರಂಭವಾಗಿರುವ ಅ.14 ರಿಂದ ಅ.17 ರವರೆಗೆ ವಿವಿಧ ಮೂಲಗಳಿಂದ ದೇವಸ್ಥಾನಕ್ಕೆ ಒಟ್ಟು 50,59,680 ರೂ. ಆದಾಯ ಬಂದಿದೆ. ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟ ಮತ್ತು ಲಾಡುಗಳ ಮಾರಾಟದಿಂದ ಅ.14 ರಂದು 9,88,000 ರೂ., ಅ.15 ರಂದು 9,01,660 ರೂ., ಅ.16 ರಂದು 23,88,764 ರೂ. ಮತ್ತು ಅ.17 ರಂದು 7,81,260 ರೂ. ಹಣ ಸಂಗ್ರಹವಾಗಿದೆ. ಗ್ರಹಣದ ದಿನ ಹೊರತುಪಡಿಸಿದರೆ ಇನ್ನೂ 8 ದಿನಗಳ ಕಾಲ ಸಾರ್ವಜನಿಕ ದರ್ಶನವಿದ್ದು, 2 ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯ ನಿರೀಕ್ಷೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net