

ಹಾಸನ: ಹಾಸನಾಂಬೆ-ಸಿದ್ದೇಶ್ವರಸ್ವಾಮಿ ದೇವಾಲಯ ಹುಂಡಿ ಎಣಿಕೆ ಕಾರ್ಯ ಸೋಮವಾರ ಸೂಕ್ತ ಭದ್ರತೆಯಲ್ಲಿ ಮುಗಿದಿದ್ದು, ಎಲ್ಲ ಮೂಲಗಳಿಂದ ಒಟ್ಟು 12,63,83,808 ರೂ. ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ನಗರದ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಇದರಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ, ಸ್ಕೌಟ್ಸ್ ಆಂಡ್ ಗೈಡ್ಸ್‌ನ 500 ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ 20 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಪ್ರತಿವರ್ಷದಂತೆ ಸಿದ್ದೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಹುಂಡಿ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತಾದರೂ ಬೆಳಗಿನ ಜಾವಾ ಮಳೆ ಸುರಿದ ಹಿನ್ನಲೆಯಲ್ಲಿ ಸ್ಥಳ ಬದಲಾಯಿಸಲಾಯಿತು.
ಹಾಸನಾಂಬ ಹುಂಡಿಯಲ್ಲಿ 2,55,97,567 ರೂ., ಸಿದ್ದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ 13,47,780 ರೂ. ಸಂಗ್ರಹವಾಗಿದೆ. ಅ.24 ರಿಂದ ನ. 3ರವರೆಗೆ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ನೆರವೇರಿದೆ. 20.40 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದು ಆದಾಯದಲ್ಲಿ ಹಾಸನಾಂಬ ದೇವಿ ದಾಖಲೆ ಬರೆದಿದ್ದಾಳೆ. 1 ಸಾವಿರ ರೂ. ಟಿಕೆಟ್‌ನಿಂದ 7,41,68,790 ರೂ., 300 ರೂ. ಟಿಕೆಟ್‌ನಿಂದ 1,81,27,038 ರೂ., ಲಾಡು ಪ್ರಸಾದದಿಂದ 76,77,660 ರೂ., ಸೀರೆ ಕೌಂಟರ್‌ನಿಂದ 2,00,305 ರೂ., ದೇಣಿಗೆ ಹಣ 40,908 ರೂ., ಭಕ್ತರು ಸಲ್ಲಿಸಿದ ತುಲಾಭಾರದಿಂದ 21,540 ರೂ., ಇದೇ ಮೊದಲ ಬಾರಿಗೆ ಪರಿಚಯಿಸಿದ ಆನ್‌ಲೈನ್ ಜಾಹೀರಾತಿನಿಂದ 5,50,000 ರೂ., ಇ-ಹುಂಡಿಯಲ್ಲಿ 25,408 ರೂ. ಸಂಗ್ರಹವಾಗಿದೆ.
ಅದೇ ರೀತಿ ದೇವಿಗೆ ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು 51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ, 500 ಗ್ರಾಂ ತಾಮ್ರದ ಪದಾರ್ಥಗಳು ಹುಂಡಿಯಲ್ಲಿ ಸಿಕ್ಕಿವೆ ಎಂದು ದೇವಾಲಯ ಆಡಳಿತಾಧಿಕಾರಿ ಮಾರುತಿ ಅವರು ಮಾಹಿತಿ ನೀಡಿದರು. ಬೇಲೂರು ತಹಸೀಲ್ದಾರ್ ಎಂ.ಮಮತಾ ಸೇರಿ ಬ್ಯಾಂಕ್‌ನ ಮುಖ್ಯ ಅಧಿಕಾರಿಗಳು ಹುಂಡಿ ಎಣಿಕೆಯಲ್ಲಿ ಭಾಗಿಯಾದರು.
ವಿದೇಶಿ ಕರೆನ್ಸಿ-ಆಭರಣ:
ಈ ಬಾರಿಯೂ ಸಹ ಕಾಣಿಕೆ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು, ತಾಳಿ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು, ನಿಷೇಧವಾಗಿರುವ ನೋಟುಗಳು, ವಾಚು, ಹಾರ ಸೇರಿದಂತೆ ಹಲವು ವಿವಿಧ ಬಗೆಯ ವಸ್ತುಗಳು ಇತರೆ ಬೆಳ್ಳಿ ಪದಾರ್ಥಗಳನ್ನು ಕೂಡ ಭಕ್ತರು ದೇವಿಗೆ ಅರ್ಪಣೆ ಮಾಡಿದ್ದಾರೆ.
ಕೋರಿಕೆ ಪತ್ರ ಬಹಿರಂಗ ಇಲ್ಲ:
ಈ ಬಾರಿಯೂ ವಿವಿಧ ಬೇಡಿಕೆ, ಇಷ್ಟಾರ್ಥ, ಆಸೆ-ಕನಸುಗಳನ್ನು ಈಡೇರಿಸು ತಾಯೆ ಎಂದು ಹಲವು ಕೋರಿಕೆ ಪತ್ರಗಳುನ್ನು ಹುಂಡಿ ಹಾಕಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಹುಂಡಿಯಲ್ಲಿ ಹಾಕಿರುವ ನೂರಾರು ಪತ್ರಗಳು ದೊರೆತಿವೆ. ಆದರೆ ಉಪವಿಭಾಗಾಧಿಕಾರಿ ಮಾರುತಿ ಅವರು ಹಾಸನಾಂಬ ದೇವಿಗೆ ಸಲ್ಲಿಕೆಯಾಗಿರುವ ಭಕ್ತರ ನಿವೇದನೆಯನ್ನು ಬಹಿರಂಗೊಳಿಸಬಾರದೆಂಬ ಕಟ್ಟಪ್ಟಣೆ ಹೊರಡಿಸಿದ ಹಿನ್ನಲೆಯಲ್ಲಿ ಅವುಗಳನ್ನು ಮಾಧ್ಯಮದವರಿಗೆ ನೀಡಲಿಲ್ಲ. ಭಕ್ತರ ಕೋರಿಕೆ ಗುಪ್ತವಾಗಿಯೇ ಉಳಿದಿವೆ.