ಹಾಸನಾಂಬೆ ದರ್ಶನೋತ್ಸವಕ್ಕೆ ಸಕಲ ಸಿದ್ಧತೆ

ಹಾಸನಾಂಬೆ ದರ್ಶನೋತ್ಸವಕ್ಕೆ ಸಕಲ ಸಿದ್ಧತೆ
Published on

ಹಾಸನ : ನಗರದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ವರ್ಷಕ್ಕೆ ಒಮ್ಮೆ ಮಾತ್ರ ದೇಗುಲದ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನಕ್ಕೆ ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ. ಕೇವಲ ಪೂಜಾವಿಧಿಗಳಿಗಳನ್ನಷ್ಟೇ ನಡೆಸಲಾಗಿತ್ತು. ಈ ವರ್ಷ ಅಕ್ಟೋಬರ್ 13 ರಿಂದ 27 ರವರೆಗೆ ಹಾಸನಾಂಬೆ ದರ್ಶನೋತ್ಸವ ನಡೆಯಲಿದ್ದು, ಕೋವಿಡ್ ಭೀತಿ ಇಲ್ಲದ ಕಾರಣ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.

ವರ್ಷದ ಹಿಂದೆ ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ದೇವಿಯ ಎದುರು ಹಚ್ಚಿಟ್ಟ ದೀಪ, ಅಲಂಕರಿಸಿದ ಹೂವು ಮತ್ತು ನೈವೇದ್ಯಕ್ಕೆ ಇಟ್ಟಿದ್ದ ಅನ್ನ ಈ ವರ್ಷ ಬಾಗಿಲು ತೆಗೆದ ವೇಳೆಯವರೆಗೂ ದೀಪ ಉರಿಯುತ್ತಿರುತ್ತದೆ, ಹೂವು ಬಾಡಿರುವುದಿಲ್ಲ ಮತ್ತು ಅನ್ನ ಹಳಸಿರುವುದಿಲ್ಲ ಎಂಬ ನಂಬಿಕೆ ಇರುವ ಕಾರಣಕ್ಕಾಗಿ ದೇವಿಯ ದರ್ಶನಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.


ಈ ವರ್ಷ ಅಕ್ಟೋಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ನಂತರ ಗರ್ಭಗುಡಿಯ ಸ್ವಚ್ಛತಾ ಕಾರ್ಯ, ಸುಣ್ಣ ಬಣ್ಣ ಬಳಿಯುವ ಕೆಲಸ ನಡೆಯುವುದು. ಈ ದಿನ ಸಾರ್ವಜನಿಕರಿಗೆ ದೇವಿಯ ದರ್ಶನ ಇರುವುದಿಲ್ಲ. ಆದರೆ ಧಾರ್ಮಿಕ ವಿಧಾನಗಳಂತೆ ರಾತ್ರಿಯಿಡಿ ಪೂಜಾ ಕಾರ್ಯಗಳು ನಡೆಯಲಿವೆ.

ಅ.14 ರಿಂದ ಸಾರ್ವಜನಿಕ ದರ್ಶನ:
ಅ.14 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4 ಗಂಟೆಯ ನಂತರ ದೇವರಿಗೆ ಮಹಾನೈವೇದ್ಯ ನಡೆಯುವುದರಿಂದ ಸಾರ್ವಜನಿಕ ದರ್ಶನ ಇರುವುದಿಲ್ಲ. ಅ.15 ರಿಂದ ಅ.24 ರವರೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಈ ಅವಧಿಯಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಂಜೆ 3.30 ರವರೆಗೆ ಅಮ್ಮನವರಿಗೆ ನೈವೇದ್ಯ ಇರುವುದರಿಂದ ಸಾರ್ವಜನಿಕ ದರ್ಶನ ಇರುವುದಿಲ್ಲ.

ಅ.26 ಹಗಲು-ರಾತ್ರಿ ದರ್ಶನ ಅವಕಾಶ
ಅ.25 ರಂದು ಸೂರ್ಯಗ್ರಹಣ ಇರುವುದರಿಂದ ಅಂದು ದೇವಿಯ ಸಾರ್ವಜನಿಕ ದರ್ಶನ ಇರುವುದಿಲ್ಲ. ಅ.26 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ದರ್ಶನ ಅವಕಾಶ ಇದೆ. 4 ಗಂಟೆಯ ನಂತರ ಮಹಾ ನೈವೇದ್ಯ ಇರುವುದರಿಂದ ದರ್ಶನಕ್ಕೆ ಅವಕಾಶ ಇಲ್ಲ. ಅಂದು ರಾತ್ರಿ 11 ಗಂಟೆಯಿಂದ ಮರುದಿನ ಅ.27ರ ಬೆಳಗ್ಗೆ 7 ಗಂಟೆಯವರೆಗೆ ರಾತ್ರಿಯಿಡಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ಗಂಟೆ ನಂತರ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ವಿಧಾನದಂತೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುಚ್ಚಲಾಗುವುದು.

ಸಿದ್ದೇಶ್ವರ ಸ್ವಾಮಿ ಉತ್ಸವ:
ಹಾಸನಾಂಬೆ ದರ್ಶನೋತ್ಸವ ನಡೆಯುವ ಅವಧಿಯಲ್ಲೇ ಹಾಸನಾಂಬ ದೇವಾಲಯದ ಆವರಣದಲ್ಲೇ ಇರುವ ಸಿದ್ದೇಶ್ವರ ಸ್ವಾಮಿಯ ಉತ್ಸವವೂ ನಡೆಯುತ್ತದೆ. ಈ ಬಾರಿ ಅ.23 ರಿಂದ 27 ರವರೆಗೆ ಸಿದ್ದೇಶ್ವರ ಸ್ವಾಮಿ ವಿವಿಧ ಉತ್ಸವಗಳು ಮತ್ತು ರಥೋತ್ಸವ ಜರುಗಲಿದೆ.

ಅ.10 ರಂದು ಆಭರಣಗಳ ಮೆರವಣಿಗೆ:
ಹಾಸನಾಂಬೆ ದರ್ಶನೋತ್ಸವಕ್ಕೆ ಮುನ್ನ ಅ.10 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಖಜಾನೆಯಲ್ಲಿರುವ ಅಮ್ಮನವರ ಆಭರಣಗಳನ್ನು ಪೊಲೀಸ್ ಬಿಗಿ ಭದ್ರತೆ ಮತ್ತು ಧಾರ್ಮಿಕ ವಿಧಿಗಳೊಂದಿಗೆ ಹಾಸನಾಂಬ ದೇವಾಲಯಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಗುವುದು. ಉತ್ಸವದ ವಿಧಿಗಳು ಪೂರ್ಣಗೊಂಡ ನಂತರ ನ.7 ರಂದು ಜಿಲ್ಲಾ ಖಜಾನೆಗೆ ಆಭರಣಗಳನ್ನು ಹಿಂದಿರುಗಿಸಲಾಗುವುದು.

ಬ್ಯಾರಿಕೇಡ್ ಮತ್ತು ತಾತ್ಕಾಲಿಕ ಶೆಡ್ ವ್ಯವಸ್ಥೆ:
ದೇವಿಯ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಸರತಿಸಾಲುಗಳನ್ನು ವ್ಯವಸ್ಥಿತವಾಗಿ ಮಾಡಲು ಹಾಗೂ ಬಿಸಿಲು ಮತ್ತು ಮಳೆಯಿಂದ ಭಕ್ತರಿಗೆ ರಕ್ಷಣೆ ನೀಡಲು ಬ್ಯಾರಿಕೇಡ್ ಮತ್ತು ಜಲನಿರೋಧಕ ಜರ್ಮನ್ ಶೆಡ್ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿದೆ.

ಲಾಡು, ದೊನ್ನೆ ಪ್ರಸಾದ:
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಲಾಡು ಮತ್ತು ದೊನ್ನೆ ಪ್ರಸಾದ ನೀಡಲು ತೀರ್ಮಾನಿಸಲಾಗಿದೆ. 100 ಗ್ರಾಂ ತೂಕದ ಎರಡು ಲಾಡುಗಳನ್ನು ಪ್ಯಾಕ್ ಮಾಡಿ ನಿಗದಿತ ದರದಲ್ಲಿ ಭಕ್ತರಿಗೆ ಮಾರಾಟ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ 1000 ರೂ. ಟಿಕೆಟ್ ಪಡೆದು ದರ್ಶನಕ್ಕೆ ಬರುವ ಭಕ್ತರಿಗೆ 4 ಲಾಡುಗಳನ್ನು ಮತ್ತು 300 ರೂ. ಟಿಕೆಟ್ ಪಡೆದವರಿಗೆ 2 ಲಾಡುಗಳನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೆ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಭಕ್ತರಿಗೆ ಮತ್ತು ಕರ್ತವ್ಯನಿರತ ಸಿಬ್ಬಂದಿಗೆ ಉಚಿತವಾಗಿ ದೊನ್ನೆಪ್ರಸಾದ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ವಿಶೇಷ ದರ್ಶನ:
ಸರತಿಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ ಎನ್ನುವವರು ತಲಾ 1000 ರೂ. ಟಿಕೆಟ್ ಪಡೆದು ನೇರವಾಗಿ ಮುಂಭಾಗಿಲಿನಿಂದ ತೆರಳಿ ದೇವಿಯ ದರ್ಶನ ಮಾಡಬಹುದಾಗಿದೆ. ತಲಾ 300 ರೂ. ಟಿಕೆಟ್‌ನ ವ್ಯವಸ್ಥೆ ಸಹ ಇದ್ದು, ಈ ಟಿಕೆಟ್ ಪಡೆಯುವವರಿಗೆ ದೇವಸ್ಥಾನದ ಸಮೀಪದಿಂದ ಸರತಿಸಾಲಿನಲ್ಲಿ ಸೇರಲು ಅವಕಾಶ ನೀಡಲಾಗುವುದು.

ಎಲ್‌ಇಡಿ ಪರದೆಯಲ್ಲಿ ನೇರ ಪ್ರಸಾರ ವ್ಯವಸ್ಥೆ:
ನಗರದ ಪ್ರಮುಖ ಸ್ಥಳಗಳಾದ ಸಿಟಿ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ನರಸಿಂಹರಾಜ ವೃತ್ತದಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ ದೇವಾಲಯದ ಗರ್ಭಗುಡಿ ಬಾಗಿಲು ತೆಗೆಯುವುದರಿಂದ ಹಿಡಿದು ಮುಚ್ಚುವವರೆಗೆ ಸಾರ್ವಜನಿಕ ದರ್ಶನದ ಸಮಯದಲ್ಲಿ ಪೂಜಾ ಕಾರ್ಯಗಳ ನೇರ ಪ್ರಸಾರ ಮಾಡಲಾಗುವುದು. ಅಲ್ಲದೆ ಯುಟ್ಯೂಬ್ ಚಾನಲ್‌ಗಳ ಮೂಲಕವೂ ನೇರ ಪ್ರಸಾರ ಮಾಡಲು ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾ:
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅಹಿತರಕ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಜೊತೆಗೆ ಗೃಹರಕ್ಷಕ ದಳ, ಎನ್‌ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ಸ್ವಯಂಸೇವಕರ ನೆರವನ್ನು ಪಡೆದುಕೊಳ್ಳಲಾಗುತ್ತಿದೆ. ಅಲ್ಲದೆ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ನಡೆಯುತ್ತಿದೆ.

ತುರ್ತು ಚಿಕಿತ್ಸಾ ಘಟಕ:
ಹಾಸನಾಂಬ ದೇವಾಲಯದ ಬಳಿ ತುರ್ತು ಚಿಕಿತ್ಸಾ ಆರೋಗ್ಯ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಘಟಕದಲ್ಲಿ ತುರ್ತು ಅಗತ್ಯವಿರುವ ಔಷಧಗಳನ್ನು ದಾಸ್ತಾನಿರಿಸಿ ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ ಮುಂಜಾಗ್ರತಾ ದೃಷ್ಟಿಯಿಂದ ಒಂದು ಅಂಬುಲೆನ್ಸ್ ಈ ಘಟಕದಲ್ಲಿ ನಿಯೋಜನೆಗೊಂಡಿರಲಿದೆ.

ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ:
ಹಾಸನಾಂಬ ದೇವಾಲಯದ ಒಳಗೆ ಮತ್ತು ಹೊರಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವಾಲಯದ ಸಮೀಪ ತಾತ್ಕಾಲಿಕ ಶೌಚಾಲಯ ನಿರ್ಮಿಸಲು ನಗರಸಭೆ ಕ್ರಮ ಕೈಗೊಂಡಿದೆ. ಅಲ್ಲದೆ ಮಳೆಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿಗೂ ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಮುಂದಾಗಿವೆ.

ಪ್ರೀತಂ ಗೌಡ, ಶಾಸಕ, ಹಾಸನ ವಿಧಾನಸಭಾ ಕ್ಷೇತ್ರ.

‘‘ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ನಂತರ ಹಾಸನಾಂಬೆ ದರ್ಶನೋತ್ಸವ ನಡೆಯುತ್ತಿರುವುದರಿಂದ ನಿರೀಕ್ಷೆಯಂತೆ ಭಕ್ತರ ಸಂಖ್ಯೆ ಹೆಚ್ಚಲಿದೆ. ಹಾಗಾಗಿ ಯಾವುದೇ ಲೋಪವಾಗದಂತೆ, ಧಾರ್ಮಿಕ ವಿಧಿಗಳಿಗೂ ಚ್ಯುತಿ ಬರದಂತೆ ಉತ್ಸವ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.’’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net