

ಹಾಸನ: ಗುರುವಾರ ಆರಂಭವಾಗಲಿರುವ ಹಾಸನಾಂಬೆ ದರ್ಶನೋತ್ಸವ ಕೋವಿಡ್ ಸಾಂಕ್ರಾಮಿಕದ ನಂತರ ನಡೆಯುತ್ತಿರುವ ಮೊದಲ ಮುಕ್ತ ಸಾರ್ವಜನಿಕ ದರ್ಶನ ಆಗಿರುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ, ಭಕ್ತರಿಗೆ ಯಾವುದೇ ರೀತಿಯ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದರು.
ದರ್ಶನೋತ್ಸವ ಆರಂಭದ ಮುನ್ನ ದಿನವಾದ ಬುಧವಾರ ಸಂಜೆ ಹಾಸನಾಂಬೆ ದೇವಾಲಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ, ಗುರುವಾರ ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಸಕಲ ಧಾರ್ಮಿಕ ವಿಧಿಗಳೊಂದಿಗೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುವುದು. ಮೊದಲ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗೊಂದಲ ರಹಿತ ವ್ಯವಸ್ಥೆ: ಈ ಬಾರಿ ಯಾವುದೇ ಗೊಂದಲ ಉಂಟಾಗದಂತೆ ದೇವಿಯ ದರ್ಶನ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದ್ದು, ವಿಐಪಿ ಪಾಸ್‌ಗಳು, ವಿಶೇಷ ದರ್ಶನ ಟಿಕೆಟ್‌ಗಳ ಮೇಲೆ ಪ್ರವೇಶ ದ್ವಾರಗಳ ಸಂಖ್ಯೆಯನ್ನು ನಮೂದಿಸಲಾಗುವುದು. ಪಾಸ್ ಮತ್ತು ಟಿಕೆಟ್ ಪಡೆದವರು ಸಂಬಂಧಪಟ್ಟ ಪ್ರವೇಶ ದ್ವಾರದ ಮೂಲಕ ಸಾಲಾಗಿ ಹೋಗಿ ದೇವಿಯ ದರ್ಶನ ಪಡೆಯಬಹುದು. ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಬಸ್ ಮತ್ತು ರೈಲು ನಿಲ್ದಾಣಗಳಲ್ಲೂ ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಅಲ್ಲಿಯೇ ಟಿಕೆಟ್ ಖರೀದಿಸಿ ನೇರವಾಗಿ ದೇವಾಲಯಕ್ಕೆ ಬರಬಹುದು ಎಂದು ವಿವರ ನೀಡಿದರು.
ಟಿಕೆಟ್ ಖರೀದಿ ಮತ್ತು ವಾಹನ ಪಾರ್ಕಿಂಗ್ ವಿಚಾರದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗಿದೆ. ತಾತ್ಕಾಲಿಕ ಶೌಚಗೃಹಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಅಂಗವಿಕಲರು, ವೃದ್ಧರು, ಗರ್ಭಿಣಿಯರಿಗೆ ಹಿಂಬಾಗಿಲ ಪ್ರವೇಶ: ಸರದಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದ ಅಂಗವಿಕಲರು, ಗರ್ಭಿಣಿಯರು ಮತ್ತು ವೃದ್ಧರಿಗೆ ದೇವಾಲಯದ ಹಿಂಬಾಗಿಲ ಗೇಟ್ ಮೂಲಕ ಪ್ರವೇಶ ನೀಡಲಾಗುವುದು. ದೇವಾಲಯದ ಮುಂಭಾಗದ ಪ್ರಮುಖ ದ್ವಾರದಲ್ಲಿ ಅತಿಗಣ್ಯರಿಗೆ ಮಾತ್ರ ಪ್ರವೇಶ ಇರುತ್ತದೆ. ಈ ಬಾರಿಯ ವಿಶೇಷ ವ್ಯವಸ್ಥೆ ಎಂದರೆ, ಸಾರ್ವಜನಿಕ ದರ್ಶನದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಸರತಿ ಸಾಲನ್ನು ತಡೆಯುವುದಿಲ್ಲ. ಅತಿಗಣ್ಯರು ಬಂದು ಪೂಜೆ ಸಲ್ಲಿಸುವ ಸಮಯದಲ್ಲೂ ಸಾರ್ವಜನಿಕರ ಸರತಿ ಸಾಲಿನ ದರ್ಶನ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ದೇವಾಲಯದ ಆಡಳಿತಾಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ಮಾತನಾಡಿ, ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಹಾಸನ ಶಾಸಕ ಪ್ರೀತಂಗೌಡ ಮತ್ತು ಇತರ ಗಣ್ಯರು ಹಾಜರಿರುತ್ತಾರೆ. ಗರ್ಭಗುಡಿಯ ಸ್ವಚ್ಛತೆ ಮತ್ತು ದೇವರ ಅಲಂಕಾರ ಕಾರ್ಯ ಇರುವುದರಿಂದ ಮೊದಲ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಗ್ರಹಣದ ದಿನವಾದ ಅ.25 ಮತ್ತು ಗರ್ಭಗುಡಿಯ ಬಾಗಿಲು ಮುಚ್ಚುವ ದಿನವಾದ ಅ.27 ರಂದು ಸಾರ್ವಜನಿಕರಿಗೆ ದೇವಾಲಯ ಪ್ರವೇಶ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಉಚಿತ ಪ್ರಸಾದ: ದೊನ್ನೆಯಲ್ಲಿ ಪ್ರಸಾದವನ್ನು ಭಕ್ತರಿಗೆ ನೀಡಲಾಗುವುದು. ಲಾಡುಗಳನ್ನು ಪ್ರತಿಯೊಂದಕ್ಕೆ 60 ರೂ. ನೀಡಿ ಭಕ್ತರು ಖರೀದಿಸಬಹುದು. ವಿಶೇಷ ದರ್ಶನದ 300 ರೂ. ಟಿಕೆಟ್ ಪಡೆದವರಿಗೆ ಎರಡು ಲಾಡು ಮತ್ತು ಸಾವಿರ ರೂ. ಟಿಕೆಟ್ ಪಡೆದವರಿಗೆ 4 ಲಾಡುಗಳನ್ನು ಉಚಿತವಾಗಿ ಕೊಡಲಾಗುವುದು ಎಂದು ತಿಳಿಸಿದರು.
ಭಕ್ತರು ಹರಕೆಯ ರೂಪದಲ್ಲಿ ಅರ್ಪಿಸುವ ಬಟ್ಟೆ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ದರ್ಶನೋತ್ಸವಗಳಲ್ಲಿ ಆಗಿರುವ ಲೋಪದೋಷಗಳನ್ನು ತಿದ್ದಿಕೊಂಡು ಈ ಬಾರಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ, ಸಕಲೇಶಪುರ ಎಎಸ್ಪಿ ಮಿಥುನ್, ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ ಉಪಸ್ಥಿತರಿದ್ದರು.