

ಹಾಸನ: ಹಾಸನಾಂಬೆ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಅಲ್ಲದೆ ಸಾವಿರಾರು ಬಕ್ತರ ಸಮೂಹ ಗುಂಪು ಗುಂಪಾಗಿ ದಂಡನ್ನು ಕಟ್ಟಿಕೊಂಡು ಬಂದು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಸಾರ್ವಜನಿಕ ದರ್ಶನದ 8ನೇ ದಿನವಾದ ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಜನರಲ್ಲದೆ ಅತಿಥಿ ಗಣ್ಯರುಗಳಾದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಪ್ರೀತಂಜೆ.ಗೌಡ, ಬ್ರಹ್ಮಾಂಡ ಗುರೂಜಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು.
ಸಂಜೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಎಲ್. ಬೈರಪ್ಪ ಅವರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ ಜೊತೆಯಲ್ಲಿದ್ದರು.
ದೇವಾಲಯಕ್ಕೆ ಮೂರನೇ ಭಾರಿ ವಿಶೇಷವಾಗಿ ಬಾಳೆ ದಿಂಡು ಹಾಗೂ ತೆಂಗಿನ ಗರಿಯಿಂದ ಅಲಂಕಾರ ಮಾಡಲಾಗಿದ್ದು ಜನರನ್ನು ಆಕರ್ಷಿಸುವಂತಿತ್ತು. ಜನರು ದೇವಾಲಯವನ್ನು ಕಣ್ತುಂಬಿಕೊಂಡರು. ಶುಕ್ರವಾರ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಸಹಸ್ರಾರು ಭಕ್ತರು ಹಾಸನಾಂಬೆ ದರ್ಶನ ಪಡೆದರು.ಅಲ್ಲದೆ ಮದ್ಯಾಹ್ನ ದೇವಿ ದರ್ಶನಕ್ಕೆ ಕಾದಿದ್ದ ಭಕ್ತಾಧಿಗಳು ನಿಂತು ದೇವಾಲಯದ ಒಳಗೆ ಬಿಡುವಂತೆ ಓ.. ಎಂದು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಸಾವಿರ ರೂ. ಹಾಗೂ 300 ರೂ. ಟಿಕೇಟ್ ಸಾಲುಗಳಲ್ಲೂ ಹೆಚ್ಚಿನ ಭಕ್ತಾಧಿಗಳು ಆಗಮಿದರು. ಅಲ್ಲದೇ ದೇವಾಲಯಕ್ಕೆ ಆಗಮಿಸುತ್ತಿದುವ ಗಣ್ಯರಿಗೂ ಬ್ಯಾರಿಗೇಡ್ ಮಾಡಲಾಗಿದ್ದು ಸಾಲಿಸಲ್ಲಿ ಹೋಗುವ ವ್ಯವಸ್ಥೆ ಮಾಡಲಾಗಿತ್ತು.
ಶನಿವಾರ ವೀಕೆಂಡ್‌ಮತ್ತು ಭಾನುವಾರ ರಜಾದಿನ ಆಗಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಆಗುವ ಸಾಧ್ಯತೆ ಇದ್ದು, ಇಂದು ಸಂಜೆವರೆಗೂ ಮಳೆ ಬಿಡುವು ನೀಡಿದ್ದರಿಂದ ಭಕ್ತರು ನಿರಾಂತರವಾಗಿ ಹಾಸನಾಂಬೆ ದೇವತೆಯನ್ನು ಕಣ್ತುಂಬಿಕೊಂಡರು.
2ನೇ ಭಾರಿ ದೇವಿಯ ದರ್ಶನ:
ಮಾಜಿ ಸಚಿವ ಎಚ್.ಡಿ.ರೇವಣ್ಣ ಶುಕ್ರವಾರ 2 ನೇ ಭಾರಿ ಹಾಸನಾಂಬೆ ದರ್ಶನ ಪಡೆದು ಮಾತನಾಡಿದ ಅವರು, ಶುಕ್ರವಾರ ದೇವಿ ದರ್ಶನ ಮಾಡಿದ್ದೇನೆ. ಆ ತಾಯಿ ದಯೆಯಿಂದ ಜಿಲ್ಲೆ ಹಾಗೂ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆಯಾಗಿದೆ. ಬೆಳೆಯೂ ಚೆನ್ನಾಗಬೇಕು. ಜಾಸ್ತಿ ಮಳೆಯಾಗಿ ಬೆಂಗಳೂರು ನಗರದ ಜನತೆಗೆ, ರೈತರಿಗೆ ತೊಂದರೆಯಾಗಿದೆ. ತಾಯಿಯ ದಯೆಯಿಂದ ಕೊರೊನಾ ಹೋಗಿ ಭಕ್ತರಿಗೆ ದೇವಿ ದರ್ಶನ ನೀಡುತ್ತಿದ್ದಾಳೆ. ಆ ತಾಯಿಯ ಆಶೀರ್ವಾದದಿಂದ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಲಿ. ಎಲ್ಲಾ ಸಮಾಜದ ಜನರಿಗೆ ಆರೋಗ್ಯ ದೊರೆಯಲಿ ಎಂದು ಆಶಿಸಿದರು.
ಪ್ರೀತಂ ಗೌಡ ರೇವಣ್ಣ ಮುಖಾಮುಖಿ:
ಇಂದು ದೇವಾಲಯದಲ್ಲಿ ಪ್ರೀತಂ ಗೌಡ ರೇವಣ್ಣ ಆರೋಪ- ಪ್ರತ್ಯಾರೋಪದ ನಂತರ ಮೊದಲ ಬಾರಿಗೆ ಶುಕ್ರವಾರ ಹಾಸನಾಂಬೆ ಸನ್ನಿಧಿಯಲ್ಲಿ ಮುಖಾಮುಖಿಯಾದರು. ರೇವಣ್ಣ ಅವರು ಎರಡನೇ ಬಾರಿಗೆ ದೇವಿ ದರ್ಶನಕ್ಕೆ ಅಗಮಿಸಿದ್ದರು. ಇದೇ ವೇಳೆಗೆ ಪ್ರೀತಂಗೌಡ ದೇವಾಲಯದ ಗರ್ಭಗುಡಿಯಲ್ಲಿದ್ದರು. ಆದರೆ ಒಬ್ಬರ ಮುಖ ಮತ್ತೊಬ್ಬರು ನೋಡದೆ ಮಾತನಾಡಲಿಲ್ಲ.
ರೇವಣ್ಣ ಬಂದ ವಿಷಯ ತಿಳಿದು ಗರ್ಭಗುಡಿ ಒಳಗೆ ಹೋಗಿ. ಸುಮಾರು ಹದಿನೈದು ನಿಮಿಷಗಳ ಕಾಲ ಗರ್ಭಗುಡಿ ಒಳಗೆ ನಿಂತು ಪೂಜೆ ಶಾಸಕರು ಪೂಜೆ ಸಲ್ಲಿಸಿದರು. ನಂತರ ಗರ್ಭಗುಡಿಯಿಂದ ಹೊರ ಬಂದ ಪ್ರೀತಂ, ರೇವಣ್ಣ ಅವರನ್ನು ನೋಡದೆ ಹೊರಟಿದ್ದು, ರೇವಣ್ಣ ಸಹ ಪ್ರೀತಂಗೌಡ ಅವರನ್ನು ನೋಡದೆ ಗರ್ಭಗುಡಿ ಒಳಗೆ ಹೆಜ್ಜೆ ಹಾಕಿದರು.
ಬ್ರಹ್ಮಾಂಡ ಗುರೂಜಿ ಆಶೀರ್ವಾದ:
ಬ್ರಹ್ಮಾಂಡ ಗೂರೂಜಿ ನರೇಂದ್ರ ಬಾಬು ಶರ್ಮ ಅವರು, ಎರಡನೇ ಬಾರಿಗೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದರು. ಇದೇ ವೇಳೆ ಅಲ್ಲೇ ಇದ್ದ ಎಚ್.ಡಿ.ರೇವಣ್ಣ ಅವರು, ಗುರೂಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ದೇವೇಗೌಡರ ಆರೋಗ್ಯ ಸುಧಾರಿಸುವ ಬಗ್ಗೆ ಬ್ರಹ್ಮಾಂಡ ಗುರೂಜಿ ಬಳಿ ಸಲಹೆ ಕೇಳಿ, ಹತ್ತು ನಿಮಿಷಗಳ ಕಾಲ ಚರ್ಚಿಸಿದರು. ರೇವಣ್ಣರವರು ನಂತರ ಗುರೂಜಿ ಅವರ ಫೋನ್ ನಂಬರ್ ಪಡೆದುಕೊಂಡರು. ದೇವಿಯ ದರ್ಶನದ ಜೊತೆಗೆ ನಮ್ಮ ಗುರುಗಳ ದರ್ಶನ ಆಗಿದ್ದು ನಮ್ಮ ಪುಣ್ಯ, ಆ ತಾಯಿನೇ ಅವರನ್ನು ಕಳುಹಿಸಿಕೊಟ್ಟಳೇನೋ ಗೊತ್ತಿಲ್ಲ ಎಂದು ರೇವಣ್ಣ ಹೇಳಿದರು.