

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಭಾನುವಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಧ್ಯಾಹ್ನ 12.33 ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.
ಐತಿಹಾಸಿಕ ಉತ್ಸವ ಅ.24 ರಿಂದ ನ 03ರವರೆಗೆ ದೇವಿ ಗರ್ಭಗುಡಿ ಬಾಗಿಲು ತೆರೆದು,20.40 ಲಕ್ಷ ಜನರಿಗೆ ದರ್ಶನ ಪಡೆದರು. ಬಲಿಪಾಡ್ಯಮಿ ಮಾರನೇ ದಿನವಾದ ಭಾನುವಾರ ಮಧ್ಯಾಹ್ನ 12.33ಕ್ಕೆ ದೇವಿಯ ಗರ್ಭಗುಡಿಯನ್ನು ಮುಚ್ಚವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು. ಸಂಪ್ರದಾಯ ಪ್ರಕಾರ ದೇವಿಯ ಸನ್ನಿಧಿಯಲ್ಲಿ ಹೂ, ನೈವೇದ್ಯ ಇಟ್ಟು, ಹಣತೆ ಹಚ್ಚಲಾಯಿತು. ಶಾಸಕರಾದ ಎಚ್.ಪಿ.ಸ್ವರೂಪ್, ಶಿವಲಿಂಗೇಗೌಡ, ಸೀಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ, ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ಅಂತಿಮ ಪೂಜೆ ನೆರವೇರಿದವು. ದೇವಾಲದ ಗರ್ಭಗುಡಿ ಭಾಗಿಲಿಗೆ ಬೀಗ ಹಾಕಿ ಸೀಲ್ ಒತ್ತಲಾಯಿತು.
ದೇವಸ್ಥಾನದ ಅರ್ಚಕರ ತಂಡ ಪೂಜೆ ನೆರವೇರಿಸಿ ದೇವಿಗೆ ಅರಿಶಿಣ, ಕುಂಕುಮ, ಬಳೆ ಸೇರಿದಂತೆ 12:15 ಗಂಟೆಗೆ ಮಂಗಳ ದ್ರವ್ಯಗಳನ್ನು ಅರ್ಪಿಸಲಾಯಿತು. ಆ ನಂತರ ಪೂಜೆ, ಪ್ರದಕ್ಷಿಣೆ, ಮಂಗಳಾರತಿ ಬಳಿಕ ಬಾಗಿಲು ಹಾಕಲಾಯಿತು. ಬಾಗಿಲು ಮುಚ್ಚಿದ ತಕ್ಷಣ ದೇವಿಗೆ ಅಲಂಕರಿಸಿದ್ದ ಆಭರಣಗಳ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಕರಿಮೆಣಸು ಕಾಳನ್ನು ಎರಚಲಾಯಿತ್ತು.ಇದನ್ನ ಭಕ್ತರು ಸಂಗ್ರಹಿಸಲು ಜನರು ಮುಗಿಬಿದ್ದರು.
ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಉಪವಿಭಾಗಾಧಿಕಾರಿಗಳಾದ ಮಾರುತಿ, ಶೃತಿ ಇದ್ದರು.
ಭಕ್ತರ ಕಾತರ:
ದೇವಿ ಗರ್ಭಗುಡಿ ಬಾಗಿಲು ಹಾಕುವ ದಿನವಾದ ಭಾನುವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂಬುದನ್ನು ಜಿಲ್ಲಾಡಳಿತ ಮೊದಲೇ ತಿಳಿಸಿತ್ತಾದರೂ, ದೇವಾಲಯದ ಒಳಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕೊನೆಯ ಬಾರಿಗೆ ದೇವಿ ದರ್ಶನ ಮಾಡಬೇಕೆಂಬ ಆಸೆಯಿಂದ ಬಂದಿದ್ದ ಜನರು ದೇವಿ ದರ್ಶನ ಲಭಿಸದೆ ವಾಪಸ್ಸಾದರು.
ಮುಂದಿನ ವರ್ಷ ಅ.9ರಿಂದ ದರ್ಶನ
ಈ ಬಾರಿ ಹಾಸನಾಂಬೆ 11 ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯವನ್ನು ಕರುಣಿಸಿದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಮುಂದಿನ ವರ್ಷ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಿಂದ (ಅ. 09 ರಿಂದ ಅ.24ರ ವರೆಗೆ) 15ದಿನಗಳ ಕಾಲ ಶಕ್ತಿ ದೇವತೆ ಹಾಸನಾಂಬ ಭಕ್ತರಿಗೆ ದರ್ಶನ ನೀಡಲಿದ್ದಾಳೆ.ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುವುದಿಲ.್ಲ ಉಳಿದಂತೆ13 ದಿನ ಭಕ್ತರಿಗೆ ದರ್ಶನ ಭಾಗ್ಯವನ್ನು ಸಿಗಲಿದೆ.
ನಾಳೆ ಹುಂಡಿ ಎಣಿಕೆ ಕಾರ್ಯ:
ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿಯ ದೇಗುಲದ ಹುಂಡಿ ಎಣಿಕೆ ಕಾರ್ಯ ಸೋಮವಾರ ಸಿದ್ದೇಶ್ವರ ಸ್ವಾಮಿ ದೇಗುಲದ ಅವರಣದಲ್ಲಿ ನಡೆಯಲಿದೆ. ಬೆಳಗ್ಗೆಯಿಂದ ಎಣಿಕೆ ಕಾರ್ಯ ವಿಧ್ಯುಕ್ತವಾಗಿ ಆರಂಭವಾಗಲಿದ್ದು, ಪೊಲೀಸರ ಬಂದೋಬಸ್ತ್ ಮತ್ತು ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಕಂದಾಯ ಇಲಾಖೆಯ ಸಿಬ್ಬಂದಿ, ಬ್ಯಾಂಕ್ ನೌಕರರು ಪಾಲ್ಗೊಳ್ಳಲಿದ್ದಾರೆ.
ಓಡಿಬಂದು ದರ್ಶನ ಪಡೆದ ಸಂಸದರು:
ಹಾಸನಾಂಬ ದೇಗುಲದ ಬಾಗಿಲನ್ನ ಹಾಕಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇದ್ದ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಓಡಿ ಹೋಗಿ ದೇವಿಯ ಕೊನೆಯ ದರ್ಶನವನ್ನು ಪಡೆದರು. ಅದೇ ರೀತಿ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಕೂಡ ಕೊನೆಯ ಕ್ಷಣದಲ್ಲಿ ದರ್ಶನ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಗೈರು:
ಹಾಸನಂಬ ದೇವಿಯ ಬಾಗಿಲು ಹಾಕುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ವರ್ಷವೂ ಕೂಡ ಹಾಜರಾಗುತ್ತಿದ್ದರು. ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಮಿಸಿಲ್ಲ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಹಿತಿ ನೀಡಿದರು.
ಈ ಬಾರಿ ಉತ್ಸವದಲ್ಲಿ ಅತಿ ಹೆಚ್ಚು ಪಾಸುಗಳನ್ನು ಹಂಚಿಕೆ ಮಾಡಿ ಅವ್ಯವಸ್ಥೆಗೆ ಕಾರಣವಾಗಿತ್ತು ಎಂಬ ಆರೋಪ ಕೇಳಿಬರತೊಡಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಮುಜುಗರದಿಂದ ಆಗಮಿಸಿಲ್ಲ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರತೊಡಗಿದೆ.