ಹಾಸನಾಂಬೆ ಉತ್ಸವಕ್ಕೆ ಕೆ. ಗೋಪಾಲಯ್ಯ ಸಿದ್ಧತೆ

ಹಾಸನಾಂಬೆ ಉತ್ಸವಕ್ಕೆ ಕೆ. ಗೋಪಾಲಯ್ಯ ಸಿದ್ಧತೆ
Published on

ಹಾಸನ: ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಎರಡು ವರ್ಷಗಳ ನಂತರ ಅಕ್ಟೋಬರ್ 13 ರಿಂದ 27 ರವರೆಗೆಹಾಸನಾಂಬ ದರ್ಶನೋತ್ಸವ ನಡೆಯತ್ತಿರುವುದರಿಂದ 3 ರಿಂದ 4 ಲಕ್ಷ ಭಕ್ತರು ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂಪ್ರದಾಯ ಹಾಗೂ ಸಡಗರಕ್ಕೆ ಯಾವುದೇ ಕುಂದುಕೊರತೆ ಉಂಟಾಗದಂತೆ ಸಿದ್ಧತೆ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಶಾಸಕರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತೆ ಪರಿಶೀಲನಾ ಸಭೆ ನಡೆಸಿದ ಸಚಿವರು, ಸ್ಥಳೀಯ ಹಾಗೂ ಹೊರಗಿನಿಂದ ಬರುವ ಭಕ್ತಾದಿಗಳಿಗೆ ಸೂಕ್ತ ಮೂಲ ಸೌಕರ್ಯ ಒದಗಿಸಬೇಕು. ಸರದಿ ಸಾಲುಗಳ ಬ್ಯಾರಿಕೇಡ್ ವ್ಯವಸ್ಥೆ ಸುಧಾರಣೆಗೆ ಗಮನ ಹರಿಸಬೇಕು ಎಂದರು.

ಭಕ್ತರಿಗೆ ಉತ್ತಮ ಗುಣಮಟ್ಟದ ಪ್ರಸಾದ ವಿನಿಯೋಗ ಮಾಡಬೇಕು. ಪುಷ್ಪಾಲಂಕಾರ, ದೀಪಾಲಂಕಾರಗಳಲ್ಲಿ ಯಾವುದೇ ಕೊರತೆ ಇರದಂತೆ ಗಮನ ಹರಿಸಬೇಕು. ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ಸ್ವಚ್ಛತಾ ಕಾರ್ಯ, ಕುಡಿಯುವ ನೀರು, ರಸ್ತೆಗಳ ದುರಸ್ತಿ ಮತ್ತಿತರ ಮೂಲಸೌಕರ್ಯಗಳ ಕುರಿತು ಹೆಚ್ಚಿನ ಗಮನ ಹರಿಸಬೇಕು. ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಈ ಬಾರಿ ಹಾಸನಾಂಬೆ ದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು. ಗಣ್ಯ ವ್ಯಕ್ತಿಗಳು ದರ್ಶನಕ್ಕೆ ಬಂದಾಗ ಇತರೆ ಭಕ್ತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ಸಿಬ್ಬಂದಿ ಸಾಲದಿದ್ದರೆ ಪಕ್ಕದ ಜಿಲ್ಲೆಗಳಿಂದ ಕರೆಸಿಕೊಳ್ಳಲು ಕ್ರಮ ವಹಿಸಬೇಕು ಎಂದು ಹೇಳಿದರು.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲು ವಿವಿಧ ಸಂಘಸಂಸ್ಥೆಗಳು ಮುಂದೆ ಬಂದಿವೆ. ಅವರಿಗೆ ನಿರ್ದಿಷ್ಟ ದಿನ ಅವಕಾಶ ನೀಡಿ ಗೊಂದಲವಾಗದಂತೆ ಪ್ರಸಾದ ವಿತರಣೆ ಕಾರ್ಯ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಪ್ರೀತಂಗೌಡ ಮಾತನಾಡಿ, ಭಕ್ತಾದಿಗಳಿಗೆ ಮೂಲ ಸೌಕರ್ಯ ಒದಗಿಸಲು ಮತ್ತು ಗೊಂದಲರಹಿತ ವ್ಯವಸ್ಥೆಗೆ ಹೆಚ್ಚಿನ ಗಮನ ಹರಿಸಬೇಕು. ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು. ಭಕ್ತಾದಿಗಳ ಒತ್ತಡವನ್ನು ಅತ್ಯಂತ ಸಂಯಮದಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಈ ವರ್ಷ ಒಂದು ತಿಂಗಳ ಮೊದಲೇ ದರ್ಶನೋತ್ಸವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಿಂದಿನ ಲೋಪಗಳು ಮರುಕಳಿಸದಂತೆ ವ್ಯವಸ್ಥಿತವಾಗಿ ಉತ್ಸವ ಏರ್ಪಡಿಸಲಾಗುವುದು. ದೇವಾಲಯದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ 7 ಕೋಟಿ ರೂ. ನಿಶ್ಚಿತ ಠೇವಣಿ ಇದೆ, 1.84 ಕೋಟಿ ರೂ. ಉಳಿತಾಯ ಖಾತೆಯ ಹಣವಿದೆ. ವಿವಿಧ ಟೆಂಡರ್ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ದೇವಾಲಯದ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್, ಸಚಿವರ ಆಪ್ತಕಾರ್ಯದರ್ಶಿ ಡಾ. ಎಂ. ರಾಮೇಗೌಡ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿವೈಎಸ್‌ಪಿ ಉದಯಭಾಸ್ಕರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮಂಜು, ನಗರ ಸಭೆ ಪೌರಾಯುಕ್ತ ಪರಮೇಶ್ವರಪ್ಪ, ತಹಸೀಲ್ದಾರ್ ನಟೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net