ಹಾಸನಾಂಬ ಮಹೋತ್ಸವ:ವ್ಯಾಪಾರ ಜೋರು

ಹಾಸನಾಂಬ ಮಹೋತ್ಸವ:ವ್ಯಾಪಾರ ಜೋರು
Published on

ಹಾಸನ: ಹಾಸನಾಂಬ ಮಹೋತ್ಸವ ಹಿನ್ನಲೆಯಲ್ಲಿ ಪ್ರತಿ ಹೋಟೆಲ್‌ಗಳಲ್ಲೂ ಜನದಟ್ಟಣೆ ಕಂಡುಬರುತ್ತಿದ್ದು ಅದರಲ್ಲೂ ಹಾಸನಾಂಬ ದೇವಾಲಯ ಸುತ್ತಲು ಇರುವ ಹೋಟೆಲ್‌ಗಳು ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಮಾಲೀಕರು ಫುಲ್ ಖುಷಿ ಆಗಿದ್ದಾರೆ. ಶಕ್ತಿ ದೇವತೆ ಹಾಸನಾಂಬ ಮಹೋತ್ಸವ ಹಿನ್ನಲೆಯಲ್ಲಿ ನಗರಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ರಜಾ ದಿನಗಳಾದ ಶನಿವಾರ ಮತ್ತು ಭಾನುವಾರ ದೇವಿ ದರ್ಶನಕ್ಕೆ ಭೇಟಿ ನೀಡಿದ ಜನರ ಸಂಖ್ಯೆ ವಿಪರೀತವಾಗಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಅನೇಕರು ರೂಮ್‌ಗಳು ಸಿಗದೆ ವಾಪಾಸ್ ಹೋಗಿರುವ ಘಟನೆಯೂ ನಡೆದಿದೆ. ನಗರದಲ್ಲಿರುವ ವಿವಿಧ ಲಾಡ್ಜ್ ಗಳಿಂದ ಸಾವಿರಕ್ಕೂ ಹೆಚ್ಚು ರೂಮ್‌ಗಳಿದ್ದು ಎಲ್ಲಾ ರೂಮ್‌ಗಳು ಕೂಡ ಭರ್ತಿಯಾಗಿವೆ. ಹಾಸನದಲ್ಲಿ ಕನಿಷ್ಟ 800 ರಿಂದ 2,500 ರೂ. ವರೆಗೆ ಬಾಡಿಗೆಯ ರೂಮ್‌ಗಳಿವೆ. ಇನ್ನು ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಕನಿಷ್ಟ 3 ಸಾವಿರ ರೂ. ವರೆಗೆ ರೂಮ್ ದೊರೆಯುತ್ತಿವೆ. ಬೇಡಿಕೆ ಹೆಚ್ಚಾದ ಮಾತ್ರಕ್ಕೆ ದರ ಏರಿಕೆಯಂತಹ ನಿರ್ಧಾರವನ್ನು ಲಾಡ್ಜ್ ಮಾಲೀಕರು ಮಾಡಿಲ್ಲ. ಅದೇ ರೀತಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೂ ಉತ್ತಮ ವ್ಯಾಪಾರವಾಗುತ್ತಿದೆ. ದೇವಿ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲಬೇಕಾಗಿರುವುದರಿಂದ ಭಕ್ತರು ಮೊದಲೇ ಉಪಾಹಾರ ಅಥವಾ ಊಟ ಮುಗಿಸಿಕೊಂಡು ದೇವಸ್ಥಾನದ ಕಡೆಗೆ ತೆರಳುತ್ತಾರೆ. ಅದರಿಂದ ನಗರ ಬಸ್ ನಿಲ್ದಾಣ ಅಕ್ಕಪಕ್ಕದಲ್ಲಿರುವ ಹೋಟೆಲ್, ಸನಾನ್, ಶೃತಿ ವೆಜ್, ಪವಮಾನ, ಮಹಾರಾಜ ಪಾರ್ಕ್ ಸಮೀಪದ ಸುಧಾ, ಸುವರ್ಣ ಹೋಟೆಲ್‌ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಒಟ್ಟಿನಲ್ಲಿ ಹಾಸನಾಂಬ ಉತ್ಸವದಿಂದ ಆರ್ಥಿಕ ಚಟುವಟಿಕೆಗಳು ಬಿರುಸು ಪಡೆದಿವೆ. ಮತ್ತೊಂದೆಡೆ ಆಟೋ ಚಾಲಕರಿಗು ಈಗ ಶುಕ್ರದೆಸೆ ಆರಂಭವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ತಣ್ಣೀರುಹಳ್ಳ, ಡೇರಿ ವೃತ್ತ ಹೀಗೆ ನಾನಾ ಕಡೆಯಿಂದ ಭಕ್ತರನ್ನು ಕರೆತರುತ್ತಿರುವ ಆಟೋ ಚಾಲಕರಿಗೆ ಒಳ್ಳೆಯ ಆದಾಯ ಬರುತ್ತಿದೆ. ಭಾನುವಾರ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಸಹ ಆಟೋದಲ್ಲಿ ದೇವಿ ದರ್ಶನಕ್ಕೆ ಬಂದ ದೃಶ್ಯಗಳು ಕಂಡುಬಂತು. ಹಾಸನಾಂಬ ಜಾತ್ರೆಗೆ ಬರುವ ಪರಸ್ಥಳದವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ ಕೆ.ಆರ್.ಪುರಂ ರಸ್ತೆಯಲ್ಲಿರುವ ಶಂಕರಮಠದಲ್ಲಿ ಪ್ರಥಮ ಬಾರಿಗೆ ಹಾಕಿಕೊಂಡಿರುವ ಊಟೋಪಚಾರ ವ್ಯವಸ್ಥೆಗೆ ಸಕಾರಾತಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ನಿತ್ಯ 450 ರಿಂದ 500 ಜನರು ಬರುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿ, ಲಗ್ಗೇಜ್ ಇಡಲು ಪರದಾಟ, ಊಟೋಪಚಾರಕ್ಕೂ ಸಮಸ್ಯೆ ಎದುರಿಸುವವರಿಗೆ ಶಂಕರಮಠ ಸಂಜೀವಿನಿಯಾಗಿದೆ. ಜಾತ್ರೆಗೆ ಬರುವ ಭಕ್ತರು ಮೊದಲೇ ಮಾಹಿತಿ ನೀಡಿದರೆ ಅಂತವರಿಗೆ ಬೆಳಗ್ಗಿನ ತಿಂಡಿ, ಸ್ನಾನದ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೇ ಲಗ್ಗೇಜ್‌ಇಟ್ಟು ದರ್ಶನದ ಬಳಿಕ ಊಟ ಮುಗಿಸಿಕೊಂಡು ಸುರಕ್ಷಿತವಾಗಿ ಹೋಗುವ ವ್ಯವಸ್ಥೆಯನ್ನು ಈ ಬಾರಿ ಪರಿಚಯಿಸಲಾಗಿದೆ. ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳಲು ಹಾಸನಾಂಬ ಉತ್ಸವ ಒಂದು ಅವಕಾಶವಾಗಿದೆಯಾದರೂ ಪ್ರಸನ್ನ ಗಣಪತಿ ದೇವಾಲಯ ರಸ್ತೆಯಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಳ್ಳುತ್ತಿದ್ದವರಿಗೆ ಈ ಬಾರಿ ಸಮಸ್ಯೆಯಾಗಿದೆ. ಜನದಟ್ಟಣೆ ನಿಯಂತ್ರಣ ಉದ್ದೇಶದಿಂದ ಅಲ್ಲಿ ಅವಕಾಶ ಮಾಡಿಕೊಡದೆ ಇರುವುದು ಸಣ್ಣ ವ್ಯಾಪಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಪ್ರತಿವರ್ಷ ಅಲ್ಲಿ ಆಟಿಕೆ ಸಾಮಾಗ್ರಿ, ಬಜ್ಜಿ-ಬೊಂಡಾ, ಚುರ್‌ಮುರಿ, ಪಾನಿಪುರಿ, ಜಿಲೇಬಿಯಂತಹ ವಿವಿಧ ಖಾದ್ಯಗಳ ಮಾರಾಟ ಮಾಡಲಾಗುತ್ತಿತ್ತು. ಜಾತ್ರೆಗೆ ಬರುವ ಭಕ್ತರು ಅಲ್ಲಿ ಖರೀದಿ ಮೂಲಕ ಸಂತಸಪಡುತ್ತಿದ್ದರು. ಆದರೆ ಈ ಬಾರಿ ಅಂತಹ ಅವಕಾಶವನ್ನು ಜಿಲ್ಲಾಡಳಿತ ಕಸಿದುಕೊಂಡಿದೆ. ಹೀಗಾಗಿ ದೇವಸ್ಥಾನದಿಂದ ಬಹುದೂರ ಎಲ್ಲೆಲ್ಲೋ ಖಾಲಿ ಜಾಗದಲ್ಲಿ ವ್ಯಾಪಾರಿಗಳು ಅಂಗಡಿ ಹಾಕಿಕೊಂಡಿದ್ದು ಅಷ್ಟೊಂದು ಆಕರ್ಷಕವಾಗಿಲ್ಲ.

ಈ ಬಾರಿ ಹಾಸನಂಬ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲಾಡ್ಜ್ ಗಳು ಸಂಪೂರ್ಣವಾಗಿ ಭರ್ತಿಯಾಗುತ್ತಿವೆ. ಶನಿವಾರ ಮತ್ತು ಭಾನುವಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇದೆ.

-ಗಣೇಶ, ಮಾಲೀಕರು ಪಾಲಿಕ ರೆಸ್ಟೋರೆಂಟ್‌ನ

ಪ್ರತಿ ಬಾರಿ ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ಹೋಟೆಲ್ ಉದ್ಯಮಗಳಿಗೆ ಉತ್ತಮ ವ್ಯಾಪಾರ ವಹಿವಾಟುವಾಗುತ್ತಿದೆ. ಈ ಬಾರಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ವ್ಯಾಪಾರವಾಗುವುದಕ್ಕಿಂತ ಎರಡು ಪಟ್ಟು ಪ್ರತಿನಿತ್ಯ ವ್ಯಾಪಾರವಾಗುತ್ತಿದೆ.

-ಅಭಿನಂದನ್, ಜಿಲಾಧ್ಯಕ್ಷ ಹೋಟೆಲ್ ಮಾಲೀಕರ ಸಂಘದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net