ಹಾಸನಾಂಬ ದರ್ಶನ ಮುಗಿಸಿಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿಯಾಗಿ ತಂದೆ-ಮಗಳು ಸಾವು

2222
ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ
Published on

ಹಾಸನ: ಹಾಸನಾಂಬ ದರ್ಶನ ಮುಗಿಸಿಕೊಂಡು ಗುರುವಾರ ರಾತ್ರಿ 11.40ರ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಲೂರು ತಾಲೂಕು, ಪಾಳ್ಯ ಹೋಬಳಿ, ಮುದ್ದನಾಯಕನಹಳ್ಳಿ ಗ್ರಾಮದ ಕುಮಾರ್ (38), ಮಗಳು ಕಾವ್ಯಾ (12) ಮೃತ ದುರ್ದೈವಿಗಳು. ಕುಮಾರ್ ಅವರ ಪತ್ನಿ ಪುಟ್ಟಮ್ಮ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಾರ್ ದಂಪತಿ ಗುರುವಾರ ಸಂಬಂಧಿಕರ ಜತೆಗೆ ಹಾಸನಾಂಬ ದೇವಿ ದರ್ಶನ ಪಡೆದು ಜಯನಗರ ಬಡಾವಣೆಯಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ರಾತ್ರಿ 11.40ರ ಸಮಯದಲ್ಲಿ ನಗರದ ತಣ್ಣೀರುಹಳ್ಳದ ಸಮೀಪ ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರು ದಂಪತಿ ಗುದ್ದಿದೆ. ಡಿಕ್ಕಿಯಾದ ರಭಸಕ್ಕೆ ಮೂವರು ರಸ್ತೆಯ ಮೇಲೆ ಬಿದ್ದು 20 ಅಡಿ ದೂರಕ್ಕೆ ಹೋಗಿ ಬಿದ್ದಿದ್ದಾರೆ.

ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಕುಮಾರ್ ಮತ್ತು ಕಾವ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುಟ್ಟಮ್ಮ ಅವರಿಗೂ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳದಲ್ಲಿ ಇದ್ದವರು ಗಾಯಾಳುಗಳನ್ನು ಆಟೋವೊಂದರಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ತಂದೆ-ಮಗಳು ಪ್ರಾಣ ಬಿಟ್ಟಿದ್ದರು. ಪುಟ್ಟಮ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದಂಪತಿಗೆ ಕಾರು ಗುದ್ದಿ ನಿಲ್ಲಿಸದೆ ಹಾಗೆ ವೇಗವಾಗಿ ಹೋಗಿದೆ.

ಘಟನೆ ಸಂಬಂಧ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net