

ಹಾಸನ : ಜಿಲ್ಲೆಯ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ 13 ರಿಂದ 27 ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾಮಹೋತ್ಸವದ ಪೂರ್ವತಯಾರಿ ಕುರಿತು ಶನಿವಾರ ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಅರ್ಚನಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ಇತರ ಅಧಿಕಾರಿಗಳು ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿ ಹಾಸನಾಂಬ ದೇವಾಲಯದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅ.13 ಮೊದಲ ದಿನ, ಅ.27 ಕೊನೆಯ ದಿನ ಹಾಗೂ ಅ.25 ರಂದು ಸೂರ್ಯ ಗ್ರಹಣದ ಪ್ರಯುಕ್ತ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ ಎಂದು ತಿಳಿಸಿದರು.
ಸಂಪ್ರದಾಯಕ್ಕೆ ಹಾಗೂ ಶಿಷ್ಠಾಚಾರಕ್ಕೆ ಯಾವುದೇ ಕುಂದು ಬರದಂತೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಹಿಂದಿಗಿಂತ ವಿಶೇಷ ಸಂಭ್ರಮ ಸ್ವರೂಪದಲ್ಲಿ ಹಾಸನಾಂಬ ದರ್ಶನೋತ್ಸವ ನಡೆಸಿ ಎಂದು ಸೂಚನೆ ನೀಡಿದರು.
ಕೋವಿಡ್‌ನಿಂದ ಎರೆಡು ವರ್ಷಗಳು ವಿಜ್ರಂಭಣೆಯ ಉತ್ಸವ ಸಾಧ್ಯವಾಗಿರಲಿಲ್ಲ. ಈ ಬಾರಿ ಭಕ್ತರಿಗೆ ಮೂಲಭೂತ ಸೌಲಭ್ಯಗಳೊಂದಿಗೆ ಹಾಗೂ ಹೆಚ್ಚಿನ ಸೌಲಭ್ಯಗಳೊಂದಿಗೆ ಉತ್ಸವ ಆಚರಣಗೆ ಗಮನ ಹರಿಸಿ. ಹತ್ತು ದಿನ ಮೊದಲೇ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಿ ಕಡೆ ಕ್ಷಣದಗೊಂದಲ ಹಾಗೂ ಒತ್ತಡಗಳನ್ನು ತಡೆಯಿರಿ ಎಂದು ತಿಳಿಸಿದರು.
ಈ ಹಿಂದಿನ ಲೋಪಗಳು ಪುನರಾವರ್ತನೆಯಾಗದಂತೆ ನಿಗಾವಹಿಸಿ ಎಲ್ಲಾ ಇಲಾಖೆಗಳು ಪರಸ್ಪರ ಪೂರಕ ಸಹಕಾರದಿಂದ ಹಾಸನಾಂಬ, ಸಿದ್ದೇಶ್ವರ ಜಾತ್ರ ಮಹೋತ್ಸವ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿ ತೀರ್ಮಾನಗಳನ್ನು ಕೈಗೊಂಡು ಜಿಲ್ಲಾಡಳಿತ ಅದನ್ನು ಅನುಷ್ಠಾನಗೊಳಿಸಲಿದೆ ಎಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಅರ್ಚನ ಅವರು ಮಾತನಾಡಿ ಹೆಚ್ಚಿನ ಮುಂಜಾಗ್ರತೆಯಿಂದ ಅಚ್ಚುಕಟ್ಟಾಗಿ ಉತ್ಸವಕ್ಕೆ ಸಿದ್ದತೆ ನಡೆಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಸಲಹೆ ಸಹಕಾರ ಪಡೆದು ಕಾರ್ಯಕ್ರಮ ನಡೆಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ನಗರಸಭೆ ಅಧ್ಯಕ್ಷ ಮೋಹನ್ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ಡಿ.ವೈಎಸ್.ಪಿ ಉದಯ ಭಾಸ್ಕರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ತಹಶಿಲ್ದಾರ್ ನಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.