

ಹಾಸನ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಸ್ಥಳೀಯ ಶಾಸಕ ಪ್ರೀತಂಗೌಡ ಅವರ ಹಸ್ತಕ್ಷೇಪ ಹೆಚ್ಚಾಗಿರುವುದರಿಂದಲೇ ಅವ್ಯವಸ್ಥೆ ಉಂಟಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಪ್ರಕಾಶ್ ಆರೋಪಿಸಿದರು.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿತ್ತು. ಆದರೆ ಶಾಸಕರು ಮತ್ತು ಅವರ ಹಿಂಬಾಲಕರು ಹಸ್ತಕ್ಷೇಪ ಮಾಡಿ ಅವ್ಯವಸ್ಥೆ ಉಂಟು ಮಾಡಿದ್ದಾರೆ ಎಂದರು.
ಹಲವು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗುಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಸರು ತಮ್ಮ ಹಿಂಬಾಲಕರನ್ನು ಮುಂದೆ ಬಿಟ್ಟು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಶಾಸಕರು ಖುದ್ದು ಗರ್ಭಗುಡಿ ಮುಂದೆ ನಿಂತು ಅಲ್ಲಿಗೆ ಯಾರೂ ಹೋಗದಂತೆ ತಡೆಯುವುದು, ಚುನಾವಣೆ ಹತ್ತಿರ ಇರುವುದರಿಂದ ಜನರಿಗೆ ಕೈ ಮುಗಿಯುತ್ತಾ ತಾವೇ ಭಕ್ತರಿಗೆ ಹೂ ನೀಡುವ ಮೂಲಕ ಧಾರ್ಮಿಕ ಕಾರ್ಯದಲ್ಲೂ ರಾಜಕೀಯ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಹಾಸನ ಕ್ಷೇತ್ರದಲ್ಲಿ ಹಿಂದೆ ತಮ್ಮ ತಂದೆ ಎಚ್.ಎಸ್. ಪ್ರಕಾಸ್, ಅದಕ್ಕೂ ಹಿಂದೆ ಕೆ.ಎಚ್. ಹನುಮೇಗೌಡರು ಶಾಸಕರಾಗಿದ್ದರು. ಅವರಾರೂ ಈ ರೀತಿಯ ಕೆಳಮಟ್ಟದ ರಾಜಕೀಯ ಮಾಡಿರಲಿಲ್ಲ. ಎಚ್.ಎಸ್. ಪ್ರಕಾಶ್ ಶಾಸಕರಾಗಿದ್ದ ಸಂದರ್ಭದಲ್ಲಿ ಹಾಸನಾಂಬ ದೇವಾಲಯ ಜೀರ್ಣೋದ್ಧಾರ ಸಮಿತಿ ರಚನೆ ಆಗಿತ್ತು. ಪ್ರತಿಬಾರಿ ಉತ್ಸವಕ್ಕೂ ಮುನ್ನ ಹಲವು ಸಭೆ ನಡೆಸುತ್ತಿದ್ದರು. ದೇವಾಲಯದ ಪ್ರವೇಶ ದ್ವಾರ ಮತ್ತು ಗೋಪುರ ನಿರ್ಮಿಸಲು ಹಲವಾರು ದಾನಿಗಳು ನೆರವಾಗಿದ್ದಾರೆ. ಅವರನ್ನು ನೆನೆಯುವ ಮತ್ತು ಅವರ ಕುಟುಂಬದವರಿಗೆ ದರ್ಶನ ಪಾಸ್ ನೀಡುವ ಕೆಲಸವನ್ನು ಹಾಲಿ ಶಾಸಕರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿಗಣ್ಯರ ಪಾಸ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಕಡೆಯವರು ಮತ್ತು ತಮಗೆ ಬೇಕಾದವರಿಗೆ ಶಾಸಕರು ಹಂಚಿಕೆ ಮಾಡಿದ್ದಾರೆ. ಭಾನುವಾರ ಅವರದೇ ಪಕ್ಷದ ಶಾಸಕ ಎಲ್. ನಾಗೇಂದ್ರ ಅವರು ಪ್ರೀತಂಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ‘ಈ ದೌಲತ್ತು ಹೆಚ್ಚು ದಿನ ನಡೆಯುವುದಿಲ್ಲ’ ಎಂಬುದಾಗಿ ಕಿಡಿಕಾರಿ ಹೋಗಿದ್ದರು. ಇಂದು ಅವರಿಬ್ಬರೂ ಅಪ್ಪಿಕೊಂಡಿದ್ದರೂ ಭಾನುವಾರದ ಘಟನೆಯಿಂದ ರಾಜ್ಯಕ್ಕೆಲ್ಲಾ ಪ್ರೀತಂಗೌಡರ ಉದ್ಧಟ ವರ್ತನೆ ಗೊತ್ತಾಗಿದೆ ಎಂದು ಟೀಕಿಸಿದರು.
ದೇವಾಲಯ ಶುದ್ಧಿ ಮಾಡಿಲ್ಲ:
ದೇವರ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟರು. ಆ ನಂತರ ದೇವಾಲಯ ಶುದ್ಧಿ ಮಾಡುವ ಕೆಲಸ ಆಗಿಲ್ಲ. ಶಾಸಕರು ಅನುಮತಿ ನೀಡಿದವರಿಗೆ ಮಾತ್ರ ಗರ್ಭಗುಡಿಗೆ ಪ್ರವೇಶ ನೀಡುತ್ತಿರುವುರಿಂದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ರೋಸಿ ಹೋಗಿದ್ದಾರೆ. ನಗರಸಭೆ ಸದಸ್ಯರನ್ನೂ ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದು ದೂರಿದರು.
ಕನ್ನಡ ಧ್ವಜ ಹಂಚಿಕೆ:
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾು ಅವರ ಕರೆಯ ಮೇರೆಗೆ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ್ಲಲಿ ಮನೆಮನೆಗಳಿಗೆ ಕನ್ನಡ ಧ್ವಜ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.22 ರಂದು ಪಂಚರತ್ನ ಯಾತ್ರೆ ಜಿಲ್ಲೆಗೆ ಆಗಮಿಸಲಿದ್ದು, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಪಕ್ಷದ ಎಲ್ಲ ಮುಖಂಡರೊಂದಿಗೆ ಚರ್ಚಿಸಿ ಯಾತ್ರೆಯ ರೂಟ್ ಮ್ಯಾಪ್ ಸಿದ್ಧಪಡಿಸುವರು ಎಂದು ಎಚ್.ಪಿ. ಸ್ವರೂಪ್ ತಿಳಿಸಿದರು.
ಸುದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅಗಿಲೆ ಮೋಹನ್, ಶಿವಣ್ಣ, ಮಹೇಶ್, ಗಿರೀಶ್, ಶ್ರೇಯಸ್ ಇತರರಿದ್ದರು.