

ಹಾಸನ : ದೇವತೆ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ವಿಶ್ವಕರ್ಮ ಚಿನ್ನ ಬೆಳ್ಳಿ ಕೆಲಸಗಾರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ಅಧಿದೇವತೆ ಹಾಸನಾಂಬ ದರ್ಶನ ಪಡೆಯಲು ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಕಂದಾಯ ಇಲಾಖೆ, ಪೊಲೀಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಶಿಬಿರಾರ್ಥಿಗಳು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಸೇವೆಗೆ ಮುಂದಾಗಿದೆ. ಕಳೆದ ವರ್ಷ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಿಸಲಾಗಿದೆ. ಈ ಬಾರಿಯೂ ಪ್ರತಿದಿನ ರಾತ್ರಿ 9 ರಿಂದ 12ರ ವರೆಗೆ ಅನ್ನ ಪ್ರಸಾದ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹಾಸನಾಂಬ ನಮ ಜಿಲ್ಲೆಯ ಐತಿಹಾಸಿಕ ಪ್ರತೀಕವಾಗಿದ್ದು ವರ್ಷದಿಂದ ವರ್ಷಕ್ಕೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸರದಿ ಸಾಲುಗಳ ನಿರ್ವಹಣೆ, ಕುಡಿಯುವ ನೀರು ಸರಬರಾಜು, ನಾಗರಿಕರ ಕರೆದೊಯ್ಯಲು ವಿಶೇಷ ವ್ಯವಸ್ಥೆ, ವಾಹನ ನಿಲುಗಡೆ ಮಾರ್ಗದರ್ಶಿಗಳು, ಪ್ರಸಾದ ವಿತರಣೆ ಹೀಗೆ ನಾನಾ ಕೆಲಸಕ್ಕೆ ಸ್ವಯಂ ಸೇವಕರ ಅವಶ್ಯಕತೆ ಹೆಚ್ಚಿರುತ್ತದೆ. ಅ. 24 ರಿಂದ ನ. 1ರ ವರೆಗೆ ನಡೆಯಲಿರುವ ಜಾತ್ರೆ ಯಶಸ್ವಿಯಾಗಲು ಸಂಘದ ಪದಾಧಿಕಾರಿಗಳು ಶಕ್ತಿಮೀರಿ ಶ್ರಮಿಸುತ್ತೇವೆ ಎಂದರು.
ಆದ್ದರಿಂದ ತಾಯಿ ಸೇವೆ ಮಾಡಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು. ಅಧಿಕೃತ ಗುರುತಿನ ಚೀಟಿ ನೀಡುವ ಮೂಲಕ ಸ್ವಯಂ ಸೇವಕರಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ಎನ್.ವೆಂಕಟೇಶ್ ರಾಜು, ಅಧ್ಯಕ್ಷ ಎಚ್.ಆರ್.ನಾಗೇಶ್,ಕಾರ್ಯದರ್ಶಿ ಆರ್.ರಾಘವೇಂದ್ರ, ದಿನೇಶ್, ರಾಘವಾಚಾರ್ ಇತರರಿದ್ದರು.