ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿ;ಸಿ. ಸತ್ಯಭಾಮಾ

ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿ;ಸಿ. ಸತ್ಯಭಾಮಾ
Published on

ಹಾಸನ:ಶ್ರೀ ಹಾಸನಾಂಬ ದೇವಿಯ ದೇವಸ್ಥಾನದ ಬಾಗಿಲನ್ನು ಅ.24 ರಂದು ತೆರೆಯಲಾಗುವುದು. ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ಸಿದ್ಧತೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅ.24 ಮತ್ತು ನ.3 ರಂದು ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ 7 ದಿನಗಳಲ್ಲೂ 24*7 ದೇವಿ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ತಿಳಿಸಿದರು.
ತೀವ್ರತರವಾದ ವಿಶೇಷ ಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ದೇವಿ ಸಾಲಿನ ಮಧ್ಯದಲ್ಲಿ ಯಾವುದೇ ಅಡೆತಡೆಯಾಗದಂತೆ ದರ್ಶನ ಪಡೆಯಲು ಕ್ರಮ ವಹಿಸಬೇಕು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಾತ್ರಾ ಮಹೋತ್ಸವ ಸನಿಹದಲ್ಲಿಯೇ ಇದೆ. ಈಗಾಗಲೇ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇರು. ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಹಳೇ ವಾಹನಗಳನ್ನು ನಿಲ್ಲಿಸಿರುವುದನ್ನು ತೆರೆವುಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದರು. ವಾಹನಗಳ ಪಾರ್ಕ್‌ಕಿಂಗ್ ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇದರ ಬಗ್ಗೆ ಪೊಲೀಸ್ ಇಲಾಖೆಯಿಂದ ನಿಗಾ ವಹಿಸಲು ಸೂಚನೆ ನೀಡಿದರು.
ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯನ್ನು ಸಂಪರ್ಕಿಸಬೇಕು. ನಗರದ ಎಲ್ಲ ರಸ್ತೆಗಳ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ. ಊರ ದೇವಿ ಜಾತ್ರಾ ಮಹೋತ್ಸವವು ಕಳೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಕಟ್ಟಡಗಳಿಗೆ ದೀಪಾಲಂಕಾರ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು. ಕಚೇರಿ ಒಳ ಮತ್ತು ಹೊರ ಆವರಣ ಸ್ವಚ್ಛತೆಗೆ ಕ್ರಮವಹಿಸಲು ಸೂಚಿದರು.
ದೇವಾಲಯದಲ್ಲಿ ಹೂವಿನ ಅಲಂಕಾರವನ್ನು ಎರಡು ದಿನಕ್ಕೊಮ್ಮೆ ಬದಲಾವಣೆ ಮಾಡಲು ಕ್ರಮ ವಹಿಸಬೇಕು. ದೇವಾಲಯದ ಬಳಿ ಸೆಲ್ಫಿ ಸ್ಟ್ಯಾಂಡ್ ನಿರ್ಮಿಸಿ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆಗೆ ಕ್ರಮ ವಹಿಸುವುದರ ಜತೆಗೆ ಸ್ವಚ್ಛತಾ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿಯೇ ಇದ್ದು, ಶೌಚಾಲಯಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕು. ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುವ ಸ್ಥಳ ಮತ್ತು ದೊನ್ನೆ ಪ್ರಸಾದ ವಿತರಣೆ ಸ್ಥಳದಲ್ಲಿಯೂ ಸ್ವಚ್ಚತೆಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಕ್ತಾದಿಗಳು ದೇವಿ ದರ್ಶನಕ್ಕೆ 300 ರೂ ಟಿಕೆಟ್ ಪಡೆದವರಿಗೆ ಒಂದು ಲಡ್ಡು, 1000 ರೂ. ಟಿಕೆಟ್‌ಗೆ ಎರಡು ಲಡ್ಡು ವಿತರಣೆ ಮಾಡಲಾಗುವುದು. ಈ ಟಿಕೆಟ್‌ಗಳಲ್ಲಿ ಬಾರ್ ಕೋಡ್ ಇರುತ್ತದೆ ಎಂದು ತಿಳಿಸಿದರು.
ಹೊಸ ಬಸ್ ನಿಲ್ದಾಣದಿಂದ ಹಾಸನಾಂಬ ದೇವಾಲಯಕ್ಕೆ ಭಕ್ತಾದಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇರುತ್ತದೆ. ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಅ.24 ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನ 1,00,000 ಹಾಗೂ ದ್ವಿತೀಯ ಬಹುಮಾನ 50,000 ರೂ. ಗಳನ್ನು ನೀಡಲಾಗುವುದು. ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ವಿಡಿಯೋಗಳನ್ನು ಮಾಡಿ ನಿಗದಿತ ವೆಬ್ ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಇವುಗಳಲ್ಲಿ ಉತ್ತಮ 16 ತಂಡಗಳನ್ನು ಆಯ್ಕೆ ಮಾಡಿ ಅ.24 ರಂದು ನಗರದ ಹೇಮಾವತಿ ಪ್ರತಿಮೆ ಬಳಿ ಸಂಜೆ 6 ಗಂಟೆಗೆ ಸ್ಪರ್ಧೆ ನಡೆಸಲಾಗುವುದು. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಅ.26 ರಿಂದ 29 ರವರಿಗೆ ಫಲಪುಷ್ಪ ಪ್ರದರ್ಶನವನ್ನು ನಗರದ ಸಿಲ್ವರ್ ಜೂಬಿಲಿ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಪ್ರವೇಶ ಶುಲ್ಕ 10 ರೂ. ಮಕ್ಕಳಿಗೆ ರೂ.5 ನಿಗದಿಪಡಿಸಿದ್ದು, ಶಾಲಾ ಸಮವಸ್ತ್ರದಲ್ಲಿ ಬರುವ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ. ಸಾರ್ವಜನಿಕರ ಮನೋರಂಜನೆಗಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹಾಸನಾಂಬ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ 4.45 ರಿಂದ 6 ಗಂಟೆಯವರೆಗೆ ದೇವಿ ಕೀರ್ತನೆಗಳನ್ನು ಹಾಡಲು ಆಸಕ್ತಿ ಇರುವ ಉತ್ತಮ ಕಂಠಸಿರಿಯಲ್ಲಿ ಹಾಡುವವರಿಂದ ಭಕ್ತಿ ಸುಧೆ ಆಯೋಜನೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಪ್ಯಾರಾ ಗ್ಲೈಂಡಿಂಗ್, ಪ್ಯಾರಾ ಮೋಟರಿಂಗ್ ಹಾಗೂ ಹಾಟ್ ಹೇರ್ ಬಲೂನ್ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಭಕ್ತಾದಿಗಳು ದೇವಿ ದರ್ಶನ ಪಡೆದ ನಂತರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಸ್ಥಾನಗಳ ಭೇಟಿ ನೀಡಲು ಸಹಕಾರಿಯಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಪ್ಯಾಕೇಜ್ ಟೂರ್ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net