ಹಾಸನಾಂಬ ಜಾತ್ರಾ ಮಹೋತ್ಸವ : ಅಗತ್ಯ ಸಿದ್ದತೆಗೆ ಸೂಚನೆ

31_HSN_08
Published on

ಹಾಸನ: ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ಹಿನ್ನಲೆಯಲ್ಲಿ ಯಾವುದೇ ಚ್ಯುತಿಬಾರದಂತೆ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಾಸನಾಂಬ ಹಾಗೂ ಸಿದ್ದೇಶ್ವರ ಚಾತ್ರಾ ಮಹೋತ್ಸವದ ನಿರ್ವಹಣೆ ಸಂಬಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಭಾರಿ ನವೆಂಬರ್ 2 ರಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದ್ದು, ದೇವರ ದರ್ಶಕ್ಕೆ ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸುತ್ತಾರೆ, ಭಕ್ತಾಧಿಗಳಿಗೆ ಯಾವುದೇ ತೊಂದರೆಯಾದಂತೆ ದರ್ಶನ ಪಡೆಯಲು ಅಗತ್ಯ ಸಿದ್ದತೆಗಳನ್ನು ಮಾಡಬೇಕು ಮೂರು ತಿಂಗಳ ಕಾಲಾವಶವಿದೆ ಅಧಿಕಾರಿಗಳು ಈಗಿನಿಂದಲೇ ಕೆಲಸಗಳಿಗೆ ನಿಯಮಾನುಸಾರ ಟೆಂಡರ್ ಕರೆದು ಕರ್ತವ್ಯ ನಿರ್ವಹಿಸಿ ಎಂದರು.

ನಗರಸಭೆಯ ವತಿಯಿಂದ ರಸ್ತೆಗಳ ದುರಸ್ಥಿ, ಸ್ವಚ್ಚತೆ, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾನರ್ಸ್‌ ಅಳವಡಿಕೆ ಹಾಗೂ ನಗರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರಲ್ಲದೆ, ಮೊಬೈಲ್ ಶೌಚಾಲಯ ಸ್ಥಾಪಿಸುವುದರ ಜೊತೆಗೆ ಅವುಗಳ ಸ್ವಚ್ಚೆತೆಗೂ ಗಮನಹರಿಸಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲು ನಿಗಾವಹಿಸಿ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಬ್ಯಾರಿಕೇಡ್ ಹಾಗೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಹಾಗೂ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ಥಿಗೆ ಕ್ರಮವಹಿಸಬೇಕು. ಸಿ.ಸಿ ಕ್ಯಾಮಾರಾ ಹಾಗೂ ಎಲ್.ಇ.ಡಿ ಪರದೆ ಅಳವಡಿಕೆಗೆ ಪ್ರವಾಸೋದ್ಯಮ ಇಲಾಖೆ ಕ್ರಮವಹಿಸುವಂತೆ ತಿಳಿಸಿದರಲ್ಲದೆ ಹೂವಿನ ಅಲಂಕಾರ, ಸ್ವಾಗತ ಕಮಾನು ಉಪವಿಭಾಗಾಧಿಕಾರಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ವಹಿಸುವಂತೆ ತಿಳಿಸಿದರು.

ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ತುರ್ತು ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ಮೊಬೈಲ್ ಕ್ಲಿನಿಕ್ ಹಾಗೂ ಸುಸ್ಸಜ್ಜಿತ ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಿಗೆ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಆಹ್ವಾನ ಪತ್ರಿಕೆಗಳ ಮುದ್ರಣ, ವಿ.ಐ.ಪಿ ಹಾಗೂ ವಿ.ವಿ.ಐ.ಪಿ ಪಾಸ್ ವಿತರಣೆ, ಭಕ್ತಾಧಿಗಳು ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಲಾಡು ಪ್ರಸಾದ್, ದೊನ್ನೆ ಪ್ರಸಾದ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ಬಿ.ಎ ಜಗದೀಶ್, ಉಪ ವಿಭಾಗಾಧಿಕಾರಿ ಮಾರುತಿ, ಹಾಸನಾಂಬ ದೇವಸ್ಥಾನದ ಅರ್ಚಕರಾದ ನಾಗರಾಜ್, ನಗರಸಭೆ ಆಯುಕ್ತರಾದ ಸತೀಶ್, ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net