ಹಾಸನದಿಂದ ಸ್ಪರ್ಧಿಸುವಂತೆ ನಿರಂತರ ಒತ್ತಡ ; ಭವಾನಿ ರೇವಣ್ಣ

ಹಾಸನದಿಂದ ಸ್ಪರ್ಧಿಸುವಂತೆ ನಿರಂತರ ಒತ್ತಡ ; ಭವಾನಿ ರೇವಣ್ಣ
Published on


ಹಾಸನ: ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜೆಡಿಎಸ್ ಕಾರ್ಯಕರ್ತರಿಂದ ಸಾಕಷ್ಟು ಒತ್ತಡ ಇದೆ. ಆದರೆ ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರು ಪ್ರಾಮಾಣಿಕವಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ಎಚ್.ಡಿ. ರೇವಣ್ಣ ಹೇಳಿದರು.


ನಗರದ ಎರಡನೇ ವಾರ್ಡ್‌ನ ಅಶೋಕ ಬಡಾವಣೆಯಲ್ಲಿ ಮಂಗಳವಾರ ಮಧ್ಯಾಹ್ನ ಸಂಸದರ ನಿಧಿಯ 12.40 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರ ಅನುಪಸ್ಥಿತಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ನಮ್ಮ ಮನೆ, ನಮ್ಮ ಮನೆಯವರೇ ಜೆಡಿಎಸ್ ಸ್ಥಾಪಕರು. ಶಾಸಕ ಎಚ್.ಡಿ. ರೇವಣ್ಣ ಅವರ ಪತ್ನಿಯಾಗಿ, ಸಂಸದ ಪ್ರಜ್ವಲ್ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ಅವರ ತಾಯಿಯಾಗಿ ಜೆಡಿಎಸ್ ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಇದೇ ರೀತಿಯ ಕೆಲಸ ಮುಂದುವರಿಯುತ್ತದೆ’ ಎಂದು ಹೇಳುವ ಮೂಲಕ ತಾವು ಸಹ ಹಾಸನ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂಬ ಮನದಿಂಗಿತವನ್ನು ಇದೇ ಮೊದಲ ಬಾರಿಗೆ ಹೊರಗೆಡಹಿದರು.


ಸಾರ್ವಜನಿಕರು ನನ್ನನ್ನು ತಮ್ಮ ಮನೆ ಮಗಳು ಎಂಬ ಭಾವನೆಯಲ್ಲಿ ಕಾರ್ಯಕ್ರಮಕ್ಕೆ ಕರೆದಾಗ ಬರುತ್ತೇನೆ. ನನ್ನ ಮಕ್ಕಳು ಮಾತ್ರ ಅಲ್ಲ, ದೇವೇಗೌಡರ ರಾಜಕೀಯ ಜೀವನದಲ್ಲಿ ಸಹ ಹಾಸನದ ಜನ ನಮ್ಮ ಜೊತೆ ನಿಂತಿದ್ದಾರೆ. ಅವರು ಕರೆದಾಗ ಬರದೆ ಇರಲು ಸಾಧ್ಯವಿಲ್ಲ. ಅದನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು.

ಪ್ರಕಾಶ್ ಹುಟ್ಟು ಹಬ್ಬ ನಮಗೆ ಗೊತ್ತಿಲ್ಲ:
ಹಾಸನದಲ್ಲಿ ಇತ್ತೀಚೆಗೆ ನಡೆದ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಭವಾನಿ, ‘ಆ ಕಾರ್ಯಕ್ರಮದ ಬಗ್ಗೆ ನನಗೇನು ಗೊತ್ತಿಲ್ಲ, ನಾನು ಬೆಂಗಳೂರಿನಲ್ಲಿ ಇರಲಿಲ್ಲ. ನಮಗೆ ಆಹ್ವಾನವೂ ಇರಲಿಲ್ಲ. ದೆಹಲಿಯಲ್ಲಿ ನಡೆದ ಡೇರಿ ಶೃಂಗಸಭೆಯಲ್ಲಿ ಭಾಗವಹಿಸಲು ನಮ್ಮ ಕುಟುಂಬದವರೆಲ್ಲರು ತೆರಳಿದ್ದೆವು. ಕುಮಾರಸ್ವಾಮಿ ಅವರು ಏನು ಮಾತನಾಡಿದ್ದಾರೆ ಎಂಬ ಬಗ್ಗೆಯೂ ನಮಗೆ ಮಾಹಿತಿ ಇಲ್ಲ’ ಎಂದು ನುಡಿದರು.

ಹಾಸನ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೆಂಬಲಿಗರು ತುಂಬಾ ಒತ್ತಡ ಹೇರುತ್ತಿದ್ದಾರೆ. ದಿನ ಬೆಳಿಗ್ಗೆಯಾದರೆ ಫೋನ್ ಮಾಡುತ್ತಾರೆ. ಮನೆಯ ಬಳಿ ಬಂದು ಹಾಸನದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಾರೆ. ಹಾಸನಕ್ಕೆ ಬಂದಾಗ, ಹೊಳೆನರಸೀಪುರದಲ್ಲಿದ್ದಾಗ, ಹಲವಾರು ಕಾರ್ಯಕ್ರಮಗಳಲ್ಲಿ, ಎಲ್ಲಾ ಕಡೆ ತುಂಬಾ ಇತ್ತಡ ಇದೆ. ಆದರೆ ಈ ವಿಷಯದಲ್ಲಿ ನಾನಾಗಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಕುಟುಂಬದಲ್ಲಿ ಹಿರಿಯರಿದ್ದಾರೆ, ಕುಮಾರಣ್ಣ, ದೇವೇಗೌಡರು, ರೇವಣ್ಣ ಇದ್ದಾರೆ, ಇಲ್ಲಿನ ಶಾಸಕರು, ಮುಖಂಡರು, ಕಾರ್ಯಕರ್ತರು ಇದ್ದಾರೆ. ಅವರ ತೀರ್ಮಾನವೇ ಅಂತಿಮ ಎಂದು ಹೇಳಿದರು.


ಹಾಸನದಲ್ಲಿ ಮಹಿಳೆಯರು ನನ್ನ ಮೇಲೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರೆಲ್ಲ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ಬದ್ಧನಾಗಿದ್ದು, ನಾನೇ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬೇಲೂರು, ಕೆ.ಆರ್.ಪೇಟೆ, ಕೆ.ಆರ್.ನಗರದಿಂದಲೂ ನನ್ನ ಹೆಸರು ಕೇಳಿಬಂದಿತ್ತು. 2004 ರಿಂದಲೂ ಎಲ್ಲಾ ಕಡೆ ನನಗೆ ಒತ್ತಡ ಇದೆ. ಅಂದು ಪಕ್ಷದ ಹಿರಿಯರ ನಿರ್ಧಾರಕ್ಕೆ ಬೆಲೆ ಕೊಟ್ಟಿದ್ದೇನೆ. ಈಗಲೇ ಬದ್ಧಳಾಗಿರುತ್ತೇನೆ ಎಂದು ನುಡಿದರು.


ಸಂಸದರು ಇಂದಿನ ಗುದ್ದಲಿಪೂಜೆ ನಡೆಸಬೇಕಿತ್ತು. ಆದರೆ ಹೊಳೆನರಸೀಪುರದಲ್ಲಿ ದೊಡ್ಡಗಣಪತಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿ ತಂದೆ, ಮಗ ಬ್ಯುಸಿಯಾಗಿದ್ದರು. ಹಾಗಾಗಿ ನನ್ನನ್ನು ಹೋಗಲು ಹೇಳಿದರು, ನಾನು ಬಂದು ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಅಷೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net