

ಹಾಸನ: ಬೈಕ್‌ನಲ್ಲಿ ಹಿಂಬಾಲಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ 60 ಗ್ರಾಂನ ಎರಡು ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಘಟನೆ ನಗರದ ರವೀಂದ್ರನಗರದ ಬಾಹುಬಲಿ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ನಗರದ ಕೆಆರ್ ಪುರ 10ನೇ ಕ್ರಾಸ್‌ನಲ್ಲಿ ವಾಸವಿರುವ ನಿವೃತ್ತ ಶಿಕ್ಷಕಿ ರೇಣುಕಾ ಸರ ಕಳೆದುಕೊಂಡ ಮಹಿಳೆ. ನಿನ್ನೆ ಸಂಜೆ ಎರಡು ಚಿನ್ನದ ಸರಗಳನ್ನು ಹಾಕಿಕೊಂಡು ರಾಘವೇಂದ್ರ ಮಠಕ್ಕೆ ಭಜನೆಗೆ ಹೊರಟಿದ್ದರು. ರಸ್ತೆಯಲ್ಲಿ ಹೊಂಚು ಹಾಕಿದ್ದ ಕಳ್ಳರು, ರೇಣುಕಾ ಅವರು ಧರಿಸಿದ್ದ ಚಿನ್ನದ ಸರ ನೋಡಿ ಹಿಂಬಾಲಿಸಿದ್ದರು. ಮೊದಲಿಗೆ ಒಬ್ಬ ರೇಣುಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ರಾಘವೇಂದ್ರ ಮಠದ ಕಡೆಗೆ ತಿರುಗುತ್ತಿದ್ದಂತೆ ರಸ್ತೆ ತಿರುವಿನಲ್ಲಿ ರೇಣುಕಾ ಕುತ್ತಿಗೆಗೆ ಕೈಹಾಕಿದ ಕಳ್ಳ ಕುತ್ತಿಗೆಯಲ್ಲಿದ್ದ ಎರಡು ಚಿನ್ನದ ಸರ ಕಿತ್ತುಕೊಂಡಿದ್ದಾನೆ. ಇನ್ನೊರ್ವ ಕಳ್ಳ ಬೈಕ್‌ನಲ್ಲಿ ಬಂದಿದ್ದಾನೆ. ಕೂಡಲೇ ಬೈಕ್ ಹತ್ತಿ ಪರಾರಿಯಾಗಿದ್ದಾರೆ.
ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಪರಾರಿಯಾಗುವಾಗ ರೇಣುಕಾ ಅವರು ಕಿರುಚಾಡುತ್ತಾ ಕಳ್ಳನ ಬೆನ್ನಟ್ಟಿದ್ದಾರೆ. ಆದರೆ ಕೈಗೆ ಸಿಗದೆ ಕಳ್ಳ ಕೂಡಲೇ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಬಡಾವಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.