

ಹಾಸನ: 2019ರ ಏಪ್ರಿಲ್ 1ರಿಂದ ಹಿಂದೆ ಖರೀದಿಸಿದ ಎಲ್ಲ ರೀತಿಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಅದರಂತೆ ರಾಜ್ಯ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಈವರೆಗೆ ಎರಡು ಬಾರಿ ಗಡುವು ವಿಸ್ತರಿಸಿ ಮೇ 31 ಕೊನೆಯ ದಿನವೆಂದು ಹೇಳಿತ್ತು. ಆದರೆ, ಈವರೆಗೂ ಜಿಲ್ಲೆಯಲ್ಲಿ ಅಂದಾಜು ಶೇ.20ರಷ್ಟು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಾಧ್ಯವಾಗಿದೆ.
ಜಿಲ್ಲೆಯಲ್ಲಿ ಅಂದಾಜು 6 ಲಕ್ಷ ವಾಹನಗಳಿವೆ. ಇವುಗಳಲ್ಲಿ 2019ರ ಹಿಂದಿನವು ಸುಮಾರು 4 ಲಕ್ಷ ವಾಹನಗಳಿವೆ. ಇವುಗಳಲ್ಲಿ ಶೇ.20ರಷ್ಟು ಅಂದರೆ ಕೇವಲ 20 ಸಾವಿರ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನೋಂದಣಿ ಪ್ಲೇಟ್ ಅಳವಡಿಕೆ ಸಾಧ್ಯವಾಗಿದೆ. ಒಂದು ವೇಳೆ ಸಾರಿಗೆ ಇಲಾಖೆ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡದಿದ್ದರೆ ಜೂ.1ರಿಂದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದೆ ರಸ್ತೆ ಮೇಲೆ ತಿರುಗಾಡುವ ಎಲ್ಲ ವಾಹನಗಳಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುವುದು. ನಂತರದಲ್ಲಿ ಮತ್ತೆ ಸಿಕ್ಕಿ ಬಿದ್ದರೆ ಪ್ರತಿ ಬಾರಿಯೂ 1 ಸಾವಿರ ರೂ. ದಂಡವನ್ನು ಕಟ್ಟಲೇಬೇಕು.
ಏನಿದು ಎಚ್‌ಎಸ್‌ಆರ್‌ಪಿ
ಎಚ್‌ಎಸ್‌ಆರ್‌ಪಿ ಎಂದರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದರ್ಥ. ಅದರೆ, ಈ ಪ್ಲೇಟ್‌ನಲ್ಲಿ ವಾಹನದ ಸಂಪೂರ್ಣ ಮಾಹಿತಿ ಈ ಪ್ಲೇಟ್‌ನಲ್ಲಿ ಅಡಕವಾಗಿರುತ್ತದೆ. ಒಂದೇ ಮಾದರಿಯ ಒಂದೇ ಗಾತ್ರದ ನಂಬರ್‌ಗಳು ಹುಬ್ಬು ಅಚ್ಚಿನಲ್ಲಿ ಇರುತ್ತದೆ. ಲಾಕ್‌ಪಿನ್ ಮೂಲಕ ಈ ಪ್ಲೇಟ್‌ಅನ್ನು ವಾಹನಕ್ಕೆ ಕೂರಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ, ಅಪಘಾತ, ಅಪರಾಧ, ಕಳ್ಳತನ ಮತ್ತೀತರ ಸಂದರ್ಭದಲ್ಲಿ ಈ ಪ್ಲೇಟ್ ಮೂಲಕ ಸುಲಭವಾಗಿ ಪತ್ತೆ ಮಾಡಬಹುದು ಎಂಬ ಕಾರಣಕ್ಕೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಲಾಗಿದೆ. ಈ ನಂಬರ್ ಪ್ಲೇಟ್‌ನಲ್ಲಿ ವಾಹನದ ಇಂಜಿನ್ ನಂಬರ್, ಚಾರ್ಸಿ ನಂಬರ್ ಪ್ರಮುಖ ಮಾಹಿತಿ ಇರಲಿದೆ. ಇದರಿಂದ ಅಪರಾಧ ಸಮಯದಲ್ಲಿ ಈ ನಂಬರ್ ಪ್ಲೇಟ್‌ಗಳಿಂದ ವಾಹನದ ಸಂಪೂರ್ಣ ಮಾಹಿತಿ ಪೊಲೀಸರಿಗೆ ತಿಳಿದುಬರಲಿದೆ.
ತಾಂತ್ರಿಕ ಸಮಸ್ಯೆಯೂ ನಿಧಾನಕ್ಕೆ ಕಾರಣ
ರಾಜ್ಯದಲ್ಲಿ ಇರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಆದೇಶ ಹೊರಡಿಸಲಾಗಿದೆ. ಆನ್‌ಲೈನ್ ಮುಖಾಂತರ ವಾಹನ ಮಾಲೀಕ ಅರ್ಜಿಯನ್ನು ಭರ್ತಿ ಮಾಡಬೇಕು. ಒಂದು ತಿಂಗಳ ಒಳಗಾಗಿ ತಾನು ನೀಡಿದ ವಿಳಾಸಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬರಲಿದೆ. ಆದರೆ, ಏಕಾಏಕಿ ಕೋಟ್ಯಂತರ ಜನರು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಅಷ್ಟು ವಾಹನಗಳಿಗೆ ನಂಬರ್ ಪ್ಲೇಟ್ ತಯಾರಿಸಿ ಕಳುಹಿಸಿಕೊಡುವುದು ಸಾರಿಗೆ ಇಲಾಖೆಗೆ ತ್ರಾಸದಾಯಕ ಕೆಲಸವಾಗುತ್ತಿದೆ. ಅಷ್ಟೇ ಅಲ್ಲದೇ ಎರಡು ತಿಂಗಳ ಹಿಂದೆ ನೋಂದಣಿ ಮಾಡಿಸಿದವರಿಗೂ ಇನ್ನು ಕೂಡ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬಂದಿಲ್ಲ.
ಯಾವ ವಾಹನಕ್ಕೆ ಎಷ್ಟು ರೂಪಾಯಿ?
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಪ್ರತಿಯೊಂದು ವಾಹನಕ್ಕೂ ಇಂತಿಷ್ಟು ದರ ಎಂದು ನಿಗದಿಪಡಿಸಲಾಗಿದೆ. ದ್ವಿ ಚಕ್ರ ವಾಹನಕ್ಕೆ 450 ರು. ತ್ರಿಚಕ್ರ ವಾಹನಗಳಿಗೆ -550, ಕಾರುಗಳಿಗೆ 650 ರೂ, ನಾಲ್ಕು ಚಕ್ರದ ಇತರೆ ಎಲ್ಲ ವಾಹನಗಳಿಗೆ 780 ರೂ. ಹಾಗೂ ಭಾರೀ ವಾಹನಗಳಾದ ಬಸ್, ಲಾರಿ, ಟ್ರಕ್ ಹಾಗೂ 10 ಚಕ್ರದ ವಾಹನಗಳಿಗೆ 650-800 ಶುಲ್ಕ ನಿಗದಿ ಮಾಡಲಾಗಿದೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ
ಒಂದು ವೇಳೆ ಮೇ 31ರ ಗಡುವನ್ನು ಸರ್ಕಾರ ಮತ್ತೆ ವಿಸ್ತರಿಸದೆ ಹೋದರೆ ಜೂ.1ರಿಂದ ವಾಹನಗಳಿಗೆ ದಂಡ ಬೀಳುವುದು ಗ್ಯಾರಂಟಿ. ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್ ವೆಬ್‌ಸೈಟಿಗೆ ಭೇಟಿ ನೀಡಿ ಅಲ್ಲಿ ನಿಗದಿತ ಎಚ್‌ಎಸ್‌ಆರ್‌ಪಿ ಅರ್ಜಿಯಲ್ಲಿ ನಿಮ್ಮ ವಾಹನದ ಮಾಹಿತಿ ನೀಡಿ ಅಪ್ಲೋಡ್ ಮಾಡಬಹುದು. ಹೀಗೆ ನೋಂದಣಿ ಮಾಡಿದ ವಾಹನಗಳಿಗೆ ಒಂದು ತಿಂಗಳ ಕಾಲ ಯಾವುದೇ ದಂಡ ಹಾಕುವಂತಿಲ್ಲ. ಆ ಸಮಯದೊಳಗೆ ನೀವು ನೀಡಿರುವ ವಿಳಾಸಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬರುತ್ತದೆ.
ಹಾಸನ ಜಿಲ್ಲೆಯಲ್ಲಿ 2019ರ ಹಿಂದೆ ನೋಂದಣಿಯಾದ ಸುಮಾರು 4 ಲಕ್ಷಕ್ಕೂ ಅಧಿಕ ವಾಹನಗಳಿವೆ. ಶೇ. 20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿದೆ. ಜೂನ್ 1ರಿಂದ ನೋಂದಣಿಯಾಗದ ವಾಹನಗಳಿಗೆ ದಂಡ ಹಾಕುವುದು ಅನಿವಾರ್ಯ. ವಾಹನಗಳ ಮಾರಾಟ ಮಾಡಬೇಕಾದರೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇರಲೇಬೇಕು. ಸಾಧ್ಯವಾದಷ್ಟು ವಾಹನ ಮಾಲೀಕರು ಇಂದೇ ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ನೋಂದಣಿ ಮಾಡಿಸಿಕೊಳ್ಳಿ.