

ಜಿಲ್ಲೆಗೊಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ದೊರೆತಿದೆ. ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಉದ್ಘಾಟನೆಗೊಳ್ಳುತ್ತಿರುವ 9 ವಿಶ್ವ ವಿದ್ಯಾಲಯಗಳ ಪೈಕಿ ಹಾಸನ ವಿಶ್ವವಿದ್ಯಾಲಯವೂ ಒಂದಾಗಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹಾಸನ ವಿವಿ ನೂತನ ಕುಲಪತಿ ಪ್ರೊ. ತಾರಾನಾಥ್ ಹೇಳಿದರು.
ನಗರದ ಹೇಮಾ ಗಂಗೋತ್ರಿ ಸಭಾಂಗಣದಲ್ಲಿ ಮಂಗಳವಾರ ನೂತನ ಹಾಸನ ವಿಶ್ವ ವಿದ್ಯಾಲಯ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಸಂಸ್ಥೆಗಾಗಿ ದುಡಿದ ಅನೇಕರ ಶ್ರಮದ ಫಲವಾಗಿ ಇಂದು ವಿಶ್ವ ವಿದ್ಯಾಲಯವಾಗಿ ಹೊರಹೊಮ್ಮಿದೆ. ಇಂದಿನಿಂದ ಹಾಸನ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ವಿಶ್ವ ವಿದ್ಯಾನಿಲಯ ನಾಂದಿ ಹಾಡಲಿ ಎಂದರು.
ರಾಜ್ಯದ ಕಲೆ, ಸಂಸ್ಕೃತಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಹಾಸನ ವಿಶೇಷ ಸ್ಥಾನ ಗಳಿಸಿದೆ. ರಸ ಋಷಿಗಳ ನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ ಎಂದರು.
ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ್ ಮೂರ್ತಿ ಅವರು ಮಾತನಾಡಿ, ವಿಶ್ವ ವಿದ್ಯಾಲಯ ಎಂದರೆ ವಿಶ್ವಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿಯುತ ಸಂಸ್ಥೆ. ಆದುದರಿಂದ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಕುಲಪತಿಗಳು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
31 ವರ್ಷದ ಹಳೆಯ ಸ್ನಾತಕೋತ್ತರ ಕೇಂದ್ರ ಇಂದು ವಿಶ್ವ ವಿದ್ಯಾಲಯವಾಗಿ ಹೊರ ಹೊಮ್ಮುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಇದೊಂದು ಹಾಸನ ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಬೇಕಿದೆ. ಈ ನಿಟ್ಟಿನಲ್ಲಿ ಸುಸಜ್ಜಿತ ಪರಿಸರ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಪರಿವರ್ತನೆಗೆ ಕಾಲ ಕೂಡಿ ಬಂದಂತಾಗಿದೆ. ಹೇಮಾ ಗಂಗೋತ್ರಿ ಸ್ನಾತಕೋತ್ತರ ಕೇಂದ್ರ ವಿಶ್ವ ವಿದ್ಯಾಲಯವಾಗಿದ್ದು ಜಿಲ್ಲೆಯಲ್ಲಿಯೇ ಉತ್ಕೃಷ್ಟ ಗುಣಮಟ್ಟದ ಹಾಗೂ ಹಲವು ವಿಷಯಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗಳು ದೊರೆಯುವಂತಾಗಲಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹೇಮಾ ಗಂಗೋತ್ರಿ ನಿರ್ದೇಶಕರಾದ ಪ್ರೊ ಸುಜಾತಾ, ಪ್ರಾಧ್ಯಾಪಕರಾದ ಪ್ರೊ. ಮಂಜುನಾಥ, ಪ್ರೊ. ಮಹದೇವಪ್ಪ, ಪ್ರೊ. ಶಂಕರ್, ಪ್ರೊ. ಮಹಾದೇವ ಪ್ರಸಾದ್, ಪ್ರೊ. ರವೀಂದ್ರ ಬಾಬು, ಪ್ರೊ. ಪುಟ್ಟಸ್ವಾಮಿ, ಪ್ರೊ. ಹಾಲಪ್ಪ ಇತರರು ಇದ್ದರು