ಹಾಸನದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

19_HSN_03
Published on

    ಹಾಸನ: ಶಿಕ್ಷಣದ ಜೊತೆಗೆ ಕ್ರೀಡೆಯು ಪ್ರಮುಖವಾದದ್ದು,ಇತ್ತೀಚಿನ ದಿನಗಳಲ್ಲಿ ಶಾಲೆಯ ಕಟ್ಟಡಗಳು ದೊಡ್ಡದಾಗುತ್ತಿವೆ ಆದರೆ ಮೈದಾನಗಳು, ಚಿಕ್ಕದಾಗುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಶಾಸಕ ಎಚ್.ಪಿ.ಸ್ವರೂಪ ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯೆ ಜೊತೆಗೆ ಕ್ರೀಡೆಯಿಂದಲೂ ಕೂಡ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ನಮ್ಮ ಜಿಲ್ಲೆಯಿಂದಲೂ ಕೂಡ ರಾಜ್ಯ ಮತ್ತು ರಾಷ್ಟ್ರಮಟ್ಟವನ್ನ ಪ್ರತಿನಿಧಿಸಿದ ಸಾಕಷ್ಟು ಜನರಿದ್ದು ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಆಟ ಮೈದಾನವನ್ನ ಕಡ್ಡಾಯವಾಗಿ ಪರಿಶೀಲಿಸಬೇಕು, ಕೇವಲ ಕಟ್ಟಡಗಳನ್ನ ನೋಡಿ ಅನುಮತಿ ನೀಡಬೇಡಿ, ಮೈದಾನ ಮತ್ತು ಇನ್ನಿತರೆ ಸೌಲಭ್ಯಗಳನ್ನು ಪರಿಶೀಲಿಸಿ ಅನುಮತಿ ನೀಡಿ ಎಂದು ಸೂಚಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಸರ್ಕಾರ ಇನ್ನು ಹೆಚ್ಚಿನ ನೆರವು ನೀಡಬೇಕು. ಆ ನಿಟ್ಟಿನಲ್ಲಿ ಗಮನ ಹರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಾತನಾಡಿ, ಕ್ರೀಡಾಪಟುಗಳು ಸೋಲು ಮತ್ತು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಬೇಕು ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.

ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಲೆಕ್ಕ ಹಾಕತ್ತಾರೆ ಆದರೆ ಸೋತವರು ಮಾಡಿದ ತಪ್ಪನ್ನು ಮುಂದೆ ಮಾಡದಂತೆ ಹೆಚ್ಚು ತರಬೇತಿ ಹಾಗೂ ಕಲಿತು ಮುಂದಿನ ದಿನಗಳಲ್ಲಿ ಆ ಸೋಲನ್ನ ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಬೇಕು.ಕ್ರೀಡಾಪಟ್ಟು ಸೋಲು-ಗೆಲವುವನ್ನು ಸಮಾನಾಗಿ ಸ್ವೀಕರಿಸುವಂತಹ ವ್ಯಕ್ತಿ ಜೀವನದಲ್ಲಿ ಉನ್ನತ ಬೆಳೆಯುತ್ತಾನೆ ಇದನ್ನ ಪ್ರತಿಯೊಬ್ಬ ಕ್ರೀಡಾಪಟು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಂತೆ ಸಮಾನವಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಹಾಗು ಅಂತಾರಾಷ್ಟೀಯ ಮಟ್ಟದಲ್ಲಿಯೂ ಕೂಡ ಸಾಧನೆ ಮಾಡುತ್ತಿದ್ದಾರೆ. ಕ್ರೀಡೆಯ ಜೊತೆಗೆ ಇತ್ತೀಚಿಗೆ ಚಂದ್ರಯಾನದಲ್ಲಿ ಕೂಡ ಹೆಣ್ಣು ಮಕ್ಕಳು ಮುಂದೆ ಇರುವುದು ಸಂತೋಷದ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಮೊದಲು ಧ್ವಜಾರೋಹಣವನ್ನು ನೆರವೇರಿಸಲಾಯಿತು.ನಂತರ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿಯನ್ನ ಜಿಲ್ಲಾಂಗಣದಲ್ಲಿ ಸ್ವಾಗತಿಸಿ,ನಂತರ ಪ್ರತಿಜ್ಞಾವಿಧಿಯನ್ನ ಬೋಧಿಸಲಾಯಿತು. ಇದೇ ವೇಳೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನೆರವೇರಿಸಿದಂತಹ ದೈಹಿಕ ಶಿಕ್ಷಕರನ್ನ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಸತೀಶ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜವರೇಗೌಡ, ವಾರ್ತ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕಿ ಮೀನಾಕ್ಷಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್, ಬಿ.ಎಂ. ವೇದಣ,್ಣ ಕೆ.ಎಲ್. ಚಕ್ರಪಾಣಿ, ಎಸ್.ಟಿ. ಗೋವಿಂದೇಗೌಡ, ಸಿ.ಕೆ. ರಘು, ಪಾಲಾಕ್ಷ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net