ಹಾಸನದಲ್ಲಿ ಗೆಲುವಿನ ನಗೆ ಬೀರಿದ ಶ್ರೇಯಸ್ ಪಟೇಲ್

ಹಾಸನದಲ್ಲಿ ಗೆಲುವಿನ ನಗೆ ಬೀರಿದ ಶ್ರೇಯಸ್ ಪಟೇಲ್
Published on

ಹಾಸನ: ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ 42,649 ಮತಗಳ ಭರ್ಜರಿ ಅಂತರದಿಂದ ಗೆಲವಿನ ನಗೆ ಬೀರಿದ್ದಾರೆ. ಈ ಮೂಲಕ ಎರಡು ದಶಕಗಳ ನಂತರ ಜೆಡಿಎಸ್ ಭದ್ರಕೋಟೆಯನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ.
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 6,30,339 ಮತಗಳನ್ನು ಪಡೆದರೆ, ಶ್ರೇಯಸ್ ಪಟೇಲ್ 6,72,988 ಮತಗಳನ್ನು ಪಡೆದು ವಿಜಯದ ಹೂ ಮಾಲೆಗೆ ಕೊರಳೊಡ್ಡಿದ್ದರು. ಇನ್ನುಳಿದಂತೆ ಬಹುಜನ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಕೆ. ಗಂಗಾಧರ್ ಬಹುಜನ್ 12,173 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ನನ್ನ ಮತ ಯಾರಿಗೂ ಇಲ್ಲ ಎಂಬ ಆಯ್ಕೆಯ ನೋಟಾಗೆ 8,541 ಮತಗಳು ಹೋಗಿದ್ದು, ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹಾಗೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಂ.ವೈ. ದೇವರಾಜು 6,057 ಮತಗಳನ್ನು ಪಡೆದುಕೊಂಡರೆ, ಎಚ್.ಡಿ. ರೇವಣ್ಣ 4,272 ಮತಗಳನ್ನು ಪಡೆದುಕೊಂಡಿದ್ದಾರೆ. ಲೋಕಸಭೆಗೆ ಸ್ಪರ್ಧೆ ಬಯಸಿದ್ದ ನಿವೃತ್ತ ಯೋದ ಜೆ.ಡಿ. ಬಸವರಾಜು 4,063, ಬಿ.ಎನ್. ಸಂತೋಷ್ 3,439, ಹೇಮಂತ್ 3,281, ಪ್ರತಾಪ್ 3,250, ಎಸ್.ಕೆ. ನಿಂಗರಾಜು 1,730, ಬಿ.ಎನ್. ಸುರೇಶ್ 1,418, ಬಿ. ಶಿವರಾಜು 848, ಕೆ.ಆರ್. ಗಂಗಾಧರಪ್ಪ 742, ಆರ್.ಜಿ. ಸತೀಶ್ ರಾಮೇದೇವರಪುರ 869, ಸಿದ್ಧಭೋವಿ 987 ಮತಗಳನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿದ್ದ 15 ಜನ ಅಭ್ಯರ್ಥಿಗಳಲ್ಲಿ ಜೆಡಿಎಸ್ ಹೊರತುಪಡಿಸಿ ಉಳಿದ 13 ಮಂದಿ ಸಹ ಠೇವಣಿ ಕಳೆದುಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲವನ್ನು ಕೆರಳಿಸುತ್ತಾ ಸಾಗಿತು. ಮೊದಲ ಸುತ್ತಿನಲ್ಲಿ ಶುಭಾರಂಭ ಕಂಡ ಪ್ರಜ್ವಲ್ ರೇವಣ್ಣ ಸತತ ನಾಲ್ಕು ಸುತ್ತುಗಳವರೆಗೂ ಮುನ್ನಡೆ ಕಾಯ್ದುಕೊಂಡರು. ಈ ಮಧ್ಯೆ ಐದನೆ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿ ಹಿಂದೆ ಹಾಕಿ 5 ಸಾವಿರ ಮತಗಳ ಅಂತರ ಕಾಯ್ದುಕೊಂಡು ಮುನ್ನಡೆ ಸಾಧಿಸಿದರು. ಅದಾದ ಬಳಿಕ ನಡೆದ ನಾಲ್ಕು ಸುತ್ತುಗಳ ಮತ ಎಣಿಕೆಯಲ್ಲಿ ಪ್ರಜ್ವಲ್ ರೇವಣ್ಣ ಮುನ್ನಡೆ ಸಾಧಿಸಿದರು. 9ನೇ ಸುತ್ತಿನ ನಂತರ ಮತ್ತೆ ಮುನ್ನಡೆಗೆ ಬಂದ ಶ್ರೇಯಸ್ ಪಟೇಲ್ ಅದಾದ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಅಂತಿಮ 20 ಸುತ್ತುಗಳ ಮತ ಎಣಿಕೆವರೆಗೂ ಮುನ್ನಡೆಯಲ್ಲಿ ಸಾಗಿದ ಶ್ರೇಯಸ್ ಕೊನೆಗೂ 42,649 ಮತಗಳ ಅಂತರದಿಂದ ಗೆಲವು ಸಾಧಿಸಿ, ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು.
ಹಾವು-ಏಣಿ ಆಟ
ಮೊದಲ ಸುತ್ತಿನಿಂದ ಹತ್ತು ಸುತ್ತಿನವರೆಗೂ ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಹಾವು-ಏಣಿ ಆಟದಂತೆ ಕಂಡು ಬಂತು. ಮೊದಲ ಸುತ್ತಿನಲ್ಲಿ ಜೆಡಿಎಸ್ 2476 ಮತಗಳ ಮುನ್ನಡೆ ಸಾಧಿಸಿತು, ಎರಡನೇ ಹಾಗೂ ಮೂರನೇ ಸುತ್ತಿನಲ್ಲೂ ಜೆಡಿಎಸ್ 2424 ಮತಗಳ ಮುನ್ನಡೆ ಪಡೆದುಕೊಂಡಿತು. ನಾಲ್ಕನೇ ಸುತ್ತಿನಲ್ಲಿ ಜೆಡಿಎಸ್ 212ಕ್ಕೆ ಮುನ್ನಡೆ ಅಂತರ ಕುಸಿಯಿತು. ಮುಂದಿನ ಸುತ್ತಿನಲ್ಲಿ 398 ಮತಗಳ ಅಂತರ ಕಾಯ್ದುಕೊಂಡು ಮುನ್ನಡೆಯಿತು. 9ನೇ ಹಂತದ ಮತ ಎಣಿಕೆಯಲ್ಲಿ ಕಾಂಗ್ರೆಸ್ 5 ಸಾವಿರ ಮತಗಳ ಕಾಯ್ದುಕೊಂಡಿತು. 10ನೇ ಸುತ್ತಿನಲ್ಲಿ 10 ಸಾವಿರ ಮತಗಳ ಮುನ್ನಡೆಯೊಂದು ಮುಂದುವರಿದು ನಂತರ ಪ್ರತಿ ಸುತ್ತಿನಲ್ಲೂ ಅಂತರವನ್ನು ಹೆಚ್ಚಿಸಿಕೊಳ್ಳುತ್ತ ಹೋಯಿತು. ಒಟ್ಟು 20 ಸುತ್ತಿನ ಮತ ಎಣಿಕೆ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 42,649 ಅಂತರದ ಮತಗಳೊಂದಿಗೆ ಗೆಲುವು ಸಾಧಿಸಿದರು.

ತಾಲೂಕುವಾರು ಫಲಿತಾಂಶ

ಕಡೂರು
ಪ್ರಜ್ವಲ್ - 76369
ಶ್ರೇಯಸ್ - 74126
ಅಂತರ-2243 ಜೆಡಿಎಸ್

ಶ್ರವಣಬೆಳಗೊಳ
ಪ್ರಜ್ವಲ್ - 81729
ಶ್ರೇಯಸ್ - 81800
ಅಂತರ-71 ಕಾಂಗ್ರಸ್

ಅರಸೀಕೆರೆ
ಪ್ರಜ್ವಲ್ - 84033
ಶ್ರೇಯಸ್ - 87126
ಅಂತರ-3093 ಕಾಂಗ್ರಸ್

ಬೇಲೂರು
ಪ್ರಜ್ವಲ್ - 74240
ಶ್ರೇಯಸ್ - 72608
ಅಂತರ-1632 ಜೆಡಿಎಸ್

ಹಾಸನ
ಪ್ರಜ್ವಲ್ - 68587
ಶ್ರೇಯಸ್ - 88347
ಅಂತರ-19760 ಕಾಂಗ್ರಸ್

ಹೊಳೆನರಸೀಪುರ
ಪ್ರಜ್ವಲ್ - 80193
ಶ್ರೇಯಸ್ - 97800
ಅಂತರ-17609 ಕಾಂಗ್ರಸ್

ಅರಕಲಗೂಡು
ಪ್ರಜ್ವಲ್ - 80637
ಶ್ರೇಯಸ್ - 95065
ಅಂತರ-14428 ಕಾಂಗ್ರಸ್

ಸಕಲೇಶಪುರ
ಪ್ರಜ್ವಲ್ - 80748
ಶ್ರೇಯಸ್ - 73402
ಅಂತರ-7346 ಜೆಡಿಎಸ್

ಒಟ್ಟು
ಪ್ರಜ್ವಲ್ - 630339
ಶ್ರೇಯಸ್ - 672988

ಗೆಲುವಿನ ಅಂತರ - 42,649

ನೋಟಾ 8541
ತಿರಸ್ಕೃತ ಮತಗಳು 2368

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net