ಹಾಸನದಲ್ಲಿ ಗುರುವಾರ ಜಿಟಿಜಿಟಿ ಮಳೆ: ಜನ ಜೀವನ ಅಸ್ತವ್ಯಸ್ಥ

ಹಾಸನದಲ್ಲಿ ಗುರುವಾರ ಜಿಟಿಜಿಟಿ ಮಳೆ: ಜನ ಜೀವನ ಅಸ್ತವ್ಯಸ್ಥ
Published on

ಹಾಸನ: ಹಾಸನ, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿದರೆ ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿ ಚಳಿಯ ಅನುಭವ ನೀಡಿತು.
ಭೀಕರ ಬರಗಾಲದಿಂದ ಬಸವಳಿದಿದ್ದ ಭೂಮಿಗೆ ಗುರುವಾರ ಸುರಿದ ಮಳೆ ತಂಪೆರೆಯಿತು. ಹಾಸನದಲ್ಲಿ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಬೆಳಿಗ್ಗೆ 7 ರಿಂದ ಆರಂಭ ಪಡೆದ ಮಳೆ ಬಿಡುವು ನೀಡದೆ ಸುರಿದನು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿಗೆ ತೆರಳಬೇಕಿದ್ದ ನೌಕರರು ಹಾಗು ಕೂಲಿ ಕಾರ್ಮಿಕರು ರೇನ್‌ಕೋರ್ಟ್, ಛತ್ರಿಯ ನೆರವಿನಿಂದ ಸಂಚರಿಸಬೇಕಾಯಿತು. ವಾಹನ ಸವಾರರು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ಬಹುತೇಕ ಜನರು ಆಟೋಗಳ ನೆರವಿನಿಂದ ತಮ್ಮ ತಾಣಗಳನ್ನು ತಲುಪಿದರು. ಇನ್ನು ಕೆಲವರು ಆಶ್ರಯಕ್ಕಾಗಿ ರಸ್ತೆಯ ಬದಿಯ ಅಂಗಡಿ, ಕಟ್ಟಡಗಳ ಮೊರೆ ಹೋದರು.
ಜಿಲ್ಲೆಯಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ತುಂತುರು ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ವಿಪರೀತ ಚಳಿ, ತಂಪನೆಯ ಗಾಳಿ ಬೀಸುತ್ತಿರುವ ಪರಿಣಾಮ ಶೀತ, ನೆಗಡಿ, ಗಂಟಲು ನೋವು, ಜ್ವರದಂತಹ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು, ಗರ್ಭಿಣಿಯರೂ ಸೇರಿ ರೋಗಿಗಳು ಶೀತ ಜ್ವರದಂತಹ ಕಾಯಿಲೆಗಳಿಗೆ ತಲ್ಲಣಿಸಿದ್ದಾರೆ.
ಅಕಾಲಿಕ ಮಳೆಯಿಂದ ರೈತ ಸಮುದಾಯ ತೊಂದರೆ ಅನುಭವಿಸುವಂತಾಗಿದೆ. ಅಲ್ಪಸಲ್ಪ ಬೆಳೆದ ಬೆಳೆಗೂ ಮಳೆ ತೀವ್ರ ಹಾನಿ ಉಂಟು ಮಾಡಿದ್ದು ರೈತರಿಗೆ ತೀವ್ರ ತಲೆನೋವು ಆಗಿ ಪರಿಣಮಿಸಿದೆ. ಕಟಾವಿಗೆ ಬಂದಿರುವ ಭತ್ತ, ರಾಗಿ, ಕಾಫಿ ಸೇರಿ ಹಲವು ಬೆಳೆಗಳು ಮಳೆಗೆ ಹಾನಿಗೊಳದಾಗಿದೆ. ರೈತರು ಈಗಾಗಲೇ ಭತ್ತ, ರಾಗಿಯನ್ನು ಕಟಾವು ಮಾಡಿ ಜಮೀನಿನಲ್ಲಿ ಸಂಗ್ರಹಿಸಿದ್ದು ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಿಗ್ಗೆಯಿಂದ ತುಂತುರು ಮಳೆ ಆರಂಭವಾಗಿದ್ದು, ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net