ಹಾಸನದಲ್ಲಿ ಗಡುಗುಸಹಿತ ಭರ್ಜರಿ ಮಳೆ

ಹಾಸನದಲ್ಲಿ ಗಡುಗುಸಹಿತ ಭರ್ಜರಿ ಮಳೆ
Published on

ಹಾಸನ : ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಅಲ್ಪ ಪ್ರಮಾಣದಲ್ಲಿ ಇಳೆಯನ್ನು ತಣಿಸಿದ್ದ ಮಳೆರಾಯ ಶುಕ್ರವಾರ ಹಾಸನ ನಗರದಲ್ಲಿ ಅಕರಶಃ ಆರ್ಭಟಿಸಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಧೋ.. ಎಂದು ಸುರಿಯಿತು. ಮಳೆಯ ಜೊತೆಗೆ ಸಿಡಿಲು ಹಾಗೂ ಗಾಳಿ ಆರ್ಭಟವೂ ಜೋರಾಗಿತ್ತು. ಈ ವರ್ಷದ ಮೊದಲ ಮಳೆ ಇದಾಗಿದ್ದು, ಬಿಸಿಲಿನ ಝಳದಿಂದ ಕಂಪಿಸಿದ ಜನರಿಗೆ ಮಳೆರಾಯ ತಂಪಿನ ಸಿಂಚನ ಉಣಬಡಿಸಿದ್ದಾನೆ.

ಒಂದೆಡೆ ಬಿರು ಬೇಸಿಗೆಯ ಧಗೆ ಮತ್ತೊಂದೆಡೆ ಚುನಾವಣಾ ಕಾವಿನಿಂದ ಕಾವಲಿಯಂತಾಗಿದ್ದ ವಾತಾವರಣ ಮಳೆಯಿಂದ ತುಸು ತಣ್ಣಗಾಯಿತು. ಜೋರು ಮಳೆ ಹಾಗೂ ಜೋರು ಗಾಳಿಯಿಂದ ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬಿದ್ದರು. ಮೊದಲ ಮಳೆಗೆ ರಸ್ತೆಯ ತುಂಬೆಲ್ಲಾ ನೀರು ತುಂಬಿ ನಿಂತಿತ್ತು. ಹಾಗೆಯೇ ಚರಂಡಿಗಳೂ ಉಕ್ಕಿಹರಿದವು. ಮಳೆ ನಿಂತ ನಂತರ ತಣ್ಣನೆಯ ವಾತಾವರಣಕ್ಕೆ ಜನರು ಮೈಯೊಡ್ಡಿ ತಣ್ಣನೆಯ ವಾತಾವರಣ ಅನುಭವಿಸಿದರು.

ನಗರದ ಹಾಗೂ ಜಿಲ್ಲೆಯ ವಿವಿಧೆಡೆ ಸುರಿದ ಜೋರು ಮಳೆಯಿಂದ ಅನ್ನದಾತರು ಸಹಜವಾಗಿಯೇ ಖುಷಿಯಾಗಿದ್ದಾರೆ. ಏಕೆಂದರೆ ಈ ಬೇಸಿಗೆಯ ತಾಪಕ್ಕೆ ಬೆಳೆಗಳೆಲ್ಲಾ ಒಣಗಿ ಹೋಗಿದ್ದವು. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಇಲ್ಲದೆ ರೈತರು ಪ್ರತಿದಿನ ಆಕಾಶ ನೋಡುವಂತಾಗಿತ್ತು. ಕೆರೆ-ಕಟ್ಟೆಗಳೆಲ್ಲಾ ನೀರಿಲ್ಲದೆ ಒಣಗಿ ಜಾನುವಾರುಗಳಿಗೂ ನೀರು ಕುಡಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸುರಿದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ.

ಈ ವರ್ಷದ ಬೇಸಿಗೆ ಶಾಖಕ್ಕೆ ಜನರು ಕನಲಿ ಹೋಗಿದ್ದರು. ಈ ವರ್ಷ ತಾಪಮಾನ ಕೂಡ ಏರಿಕೆ ಆಗಿತ್ತು. ಅತಿಯಾದ ಬಿಸಿಲಿನಿಂದ ಜನರು ಕಂಗೆಟ್ಟಿದ್ದರು. ಶುಕ್ರವಾರ ಸುರಿದ ಮಳೆಯಿಂದಾಗಿ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಮಳೆ ಹೀಗೆಯೇ ಮುಂದುವರಿದು ವಾತಾವರಣವನ್ನು ಮತ್ತಷ್ಟು ತಣ್ಣಗಿಡಲಿ ಎಂದು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net