ಹಾಸನದಲ್ಲಿ ಕಾಂಗ್ರಸ್ ಹೀನಾಯವಾಗಿ ಸೋಲುಗೆ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಕಾರಣ: ಆರೋಪ

ಹಾಸನದಲ್ಲಿ ಕಾಂಗ್ರಸ್ ಹೀನಾಯವಾಗಿ ಸೋಲುಗೆ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಕಾರಣ: ಆರೋಪ
Published on

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರೇ ಕಾರಣ, ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಎನ್.ಬಿ.ದಿನೇಶ್ ಒತ್ತಾಯಿಸಿದರು.

ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿದರೂ ನಾನೂ ಸೇರಿ ಅನೇಕರಿಗೆ ನೋಟಿಸ್ ಕೊಡಿಸುವ ಮೂಲಕ ಮುಜುಗರ ತಂದಿದ್ದಾರೆ. ಕಾಂಗ್ರೆಸ್ ಶಿಸ್ತುಪಾಲನ ಸಮಿತಿಗೆ ನಾನು ಲಿಖಿತ ರೂಪದಲ್ಲಿ ಸ್ಪಷ್ಟ ಉತ್ತರ ನೀಡುವ ಜೊತೆಗೆ ಕಾಂಗ್ರೆಸ್ ಸೋಲಿಗೆ ಕಾರಣವಾದ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ವಿರುದ್ಧವೂ ದೂರು ಸಲ್ಲಿಸಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾಸನ ಕ್ಷೇತ್ರದಲ್ಲಿ ಆಗಿರುವುದು ಕಾಂಗ್ರೆಸ್ ಪಕ್ಷದ ಸೋಲಲ್ಲ, ಬನವಾಸೆ ರಂಗಸ್ವಾಮಿ ಅವರ ಸೋಲು. ನಾನೂ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷ ಸಂಘಟನೆಯನ್ನೂ ಮಾಡಿದ್ದೆ. ಆದರೆ ಅಂತಿಮವಾಗಿ ಅವರಿಗೆ ಟಿಕೆಟ್ ಸಿಕ್ಕಿತು. ನಂತರದ ದಿನಗಳಲ್ಲೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಅವರ ಪರ ಕೆಲಸ ಮಾಡಿದೆ. ಆದರೆ ತಮ್ಮ ಸ್ವಯಂಕೃತ ಅಪರಾಧದಿಂದ ಸೋತಿರುವ ರಂಗಸ್ವಾಮಿ ಅವರು, ಎಲ್ಲರನ್ನೂ ದೂರುತ್ತಿರುವುದು ಸರಿಯಲ್ಲ ಎಂದರು.

ಯಾರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಕನಿಷ್ಠ 40 ಸಾವಿರ ಮತ ಪಡೆಯಬಹುದಾಗಿದ್ದ ಕ್ಷೇತ್ರದಲ್ಲಿ ವಿರೋಧ ಪಕ್ಷಗಳ ಜೊತೆ ಅನೈತಿಕ ಒಡಂಬಡಿಕೆ ಹಾಗು ಸಂಧಾನ ಮಾಡಿಕೊಂಡು ಕೇವಲ ನಾಲ್ಕು ಸಾವಿರದಷ್ಟು ಮತ ಪಡೆದು ಪಕ್ಷದ ಮರ್ಯಾದೆ ಹರಾಜು ಹಾಕಿದ್ದಾರೆ. ಈ ಎಲ್ಲಾ ವಿಷಯಗಳನ್ನು ಈಗಾಗಲೇ ಕಾಂಗ್ರೆಸ್ ಶಿಸ್ತು ಕ್ರಮ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇನ್ನುಮುಂದೆಯಾದರೂ ಕಾಂಗ್ರೆಸ್ ಮುಖಂಡರ ತೇಜೋವಧೆ ಮಾತು ನಿಲ್ಲಿಸಬೇಕು ಎಂದು ಎಚ್ಚರಿಸಿದ ಅವರು, ನನ್ನಿಂದ ತಪ್ಪು ಆಗಿದ್ದರೆ ರಾಜೀನಾಮೆ ಕೊಡುವೆ, ಇಲ್ಲವಾದರೆ ಅವರನ್ನೇ ಪಕ್ಷದಿಂದ ಹೊರ ಹಾಕಬೇಕು ಎಂದು ನಾನೂ ದೂರು ನೀಡಿ ಬಂದಿದ್ದೇನೆ ಎಂದರು.

ರಂಗಸ್ವಾಮಿ ಅವರು, ಆರ್‌ಎಸ್‌ಎಸ್, ಬಿಜೆಪಿ, ಜೆಡಿಎಸ್ ಕಾರ್ಯಕ್ರಮಗಳಿಗೂ ಹೋಗುತ್ತಿದ್ದರು. ಹಾಸನ ಮರದಾರರು ದಡ್ಡರಲ್ಲ. ಎಲ್ಲವನ್ನೂ ಗಮನಿಸಿಯೇ ಮತ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡರನ್ನು ಪರಿಗಣನೆಗೇ ತೆಗೆದುಕೊಳ್ಳಲಿಲ್ಲ. ಆದರೆ ರಾಜ್ಯ ನಾಯಕರಿಗೆ ಸುಳ್ಳು ವರದಿ ನೀಡಿ ಸ್ಥಾನ ಮಾನ ಪಡೆದುಕೊಂಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸೇವಾದಳ ರಾಜ್ಯ ಉಪಾಧ್ಯಕ್ಷ ಗೋಪಾಲೇಗೌಡ, ಜಿಲ್ಲಾ ಉಪಾಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಕಿರಣ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net