

ಹಾಸನ:ಕೋವಿಡ್ ಸಾಂಕ್ರಾಮಿಕದ ನಂತರ ಇದೀಗ ಸಾಕಷ್ಟು ಆತಂಕ ಹುಟ್ಟಿಸಿರುವ ಎಚ್3ಎನ್2 ವೈರಾಣು ಸೊಂಕಿಗೆ ಆಲೂರು ತಾಲೂಕು ಕಿರುಗಡಲು ಗ್ರಾಮದ ಈರೇಗೌಡ ಎಂಬ 82 ವರ್ಷದ ವೃದ್ಧ ಬಲಿ ಆಗಿದ್ದಾರೆ. ಇದು ಇಡೀ ದೇಶದಲ್ಲೇ ಎಚ್3ಎನ್2 ವೈರಾಣು ಸೋಂಕಿಗೆ ಆಗಿರುವ ಮೊದಲ ಬಲಿ ಎನ್ನಲಾಗಿದೆ. ಎಚ್3ಎನ್2 ಸೊಂಕಿಗೆ ಕರ್ನಾಟದಲ್ಲಿ ಒಬ್ಬ ಮತ್ತು ಹರ್ಯಾಣ ರಾಜ್ಯದಲ್ಲಿ ಒಬ್ಬ ರೋಗಿ ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಮಧುಮೇಹ, ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಈರೇಗೌಡರನ್ನು ಕಳೆದ ಫೆಬ್ರವರಿ 24 ರಂದು ನಗರದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯಲ್ಲಿ ಎಚ್3ಎನ್2 ವೈರಾಣು ಸೊಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಫೆ.28 ರಂದು ರೋಗಿಯ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಮರುದಿನ ಮಾರ್ಚ್ 1 ರಂದು ರೋಗಿ ಮೃತಪಟ್ಟಿದ್ದು, ರೋಗಿಯ ಮಕ್ಕಳು ಮತ್ತು ಸಂಬಂಧಿಕರು ಶವವನ್ನು ಕಿರುಗಡಲು ಗ್ರಾಮಕ್ಕೆ ಒಯ್ದು ಅಂತಿಮ ಸಂಸ್ಕಾರ ನಡೆಸಿದ್ದರು.
ಮಾರ್ಚ್ 3 ರಂದು ರೋಗಿಯ ಗಂಟಲು ದ್ರವದ ಪರೀಕ್ಷಾ ವರದಿ ಬಂದ ನಂತರ ರೋಗಿಗೆ ಎಚ್3ಎನ್2 ವೈರಾಣು ಸೋಂಕು ಇದ್ದಿದ್ದು ದೃಢಪಟ್ಟಿದೆ. ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಕಿರುಗಡಲು ಗ್ರಾಮಕ್ಕೆ ತೆರಳಿ ಮೃತ ರೋಗಿಯ ಸಂಬಂಧಿಕರು ಮತ್ತು ನೆರೆಹೊರೆಯವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದು, ಯಾರಲ್ಲೂ ಸೋಂಕು ಕಂಡು ಬಂದಿಲ್ಲ.
ಮೃತ ಈರೇಗೌಡರು ಆಸ್ಪತ್ರೆಗೆ ದಾಖಲಾಗುವ ಮುನ್ನ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಗ್ರಾಮಸ್ಥರ ಸಂಪರ್ಕಕ್ಕೆ ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಬಂಧುಗಳ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಯಾರಿಗೂ ಸೋಂಕು ಹರಡಿಲ್ಲ. ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಎನ್. ಶಿವಸ್ವಾಮಿ ತಮ್ಮನ್ನು ಭೇಟಿ ಆದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಜ್ವರ, ಶೀತ, ನೆಗಡಿ, ಕೆಮ್ಮು ಮತ್ತಿತರ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು ಮತ್ತು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಚ್3ಎನ್2 ವೈರಾಣು ಸೊಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಪೂರಕ ಚಿಕಿತ್ಸೆ ಕೊಡಲಾಗುತ್ತದೆ. ಪೌಷ್ಟಿಕ ಆಹಾರ ಸೇವನೆ ಮತ್ತು ಉತ್ತಮ ಅಭ್ಯಾಸಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಡಿಎಚ್‌ಒ ಸಲಹೆ ನೀಡಿದರು.
ರೋಗಿಗಳ ಶುಶ್ರೂಷೆ ನಡೆಸುವ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಎಚ್3ಎನ್2 ವೈರಾಣು ಸೋಂಕಿನ ಇದೊಂದೇ ಪ್ರಕರಣ ವರದಿ ಆಗಿರುವುದು. ಜನ ಗಾಬರಿ ಬೀಳುವ ಅಗತ್ಯವಿಲ್ಲ ಎಂದರು.
ಗ್ರಾಮಸ್ಥರಿಗೆ ತಿಳಿದೇ ಇಲ್ಲ:
ಆಲೂರು ತಾಲೂಕು ಕಿರುಗಡಲು ಗ್ರಾಮದ ಈರೇಗೌಡ ಎಚ್3ಎನ್2 ವೈರಾಣು ಸೋಂಕಿಗೆ ಬಲಿ ಆಗಿರುವುದು ಗ್ರಾಮಸ್ಥರಿಗೆ ತಿಳಿದೇ ಇಲ್ಲ. ಈರೇಗೌಡರು ಮೃತಪಟ್ಟಾಗ ಇನ್ನೂ ಪ್ರಯೋಗಾಲಯದ ವರದಿ ಬಂದಿಲ್ಲದ ಕಾರಣ ಸಂಬಂಧಿಕರು, ಸಹಜ ಸಾವಿನ ರೀತಿಯಲ್ಲೇ ಶವದ ಅಂತಿಮ ಸಂಸ್ಕಾರ ನಡೆಸಿದ್ದರು. ಈರೇಗೌಡರಿಗೆ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರಿದ್ದು, ಪುತ್ರ ಲೋಕೇಶ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಯೋಗಾಲಯದ ವರದಿ ಬಂದ ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ದಡಬಡಾಯಿಸಿ ಈರೇಗೌಡರು ವಾಸವಿದ್ದ ತೋಟದ ಮನೆಗೆ ಹೋಗಿ ಮಕ್ಕಳು ಮತ್ತು ಸಂಬಂಧಿಕರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಿದ್ದಾರೆ. ಆದರೆ ಗ್ರಾಮಸ್ಥರ ಪರೀಕ್ಷೆ ನಡೆಸಿಲ್ಲ. ಈರೇಗೌಡರ ಸಾವು ಎಚ್3ಎನ್2 ಸೋಂಕಿನಿಂದ ಸಂಭವಿಸಿದೆ ಎಂಬ ವಿಷಯ ಗ್ರಾಮಸ್ಥರಿಗೆ ತಿಳಿದೇ ಇಲ್ಲ ಎನ್ನಲಾಗಿದೆ.